ಎರಡು ಹೊಸ ಕೋರ್ಸ್‌ಗಳ ಆರಂಭ: ಸಂಸ್ಥೆಯ ಸಹಾಯಕ ತಾಂತ್ರಿಕ ಅಧಿಕಾರಿ ಲಕ್ಷ್ಮಣ್ ಮಾಹಿತಿ

Central Institute of Petrochemicals, Engineering and Technology Technical Officer Press Conference Mandya
Published on

ಮಂಡ್ಯ: ಪಾಲಿಮರ್, ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್‌ಗಳನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಮೈಸೂರಿನ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಈ ವರ್ಷ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ ಮತ್ತು ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಎಂಬ ಎರಡು ಹೊಸ ಕೋರ್ಸ್ ಆರಂಭಿಸಲಾಗಿದೆ ಎಂದು ಸಂಸ್ಥೆಯ ಸಹಾಯಕ ತಾಂತ್ರಿಕ ಅಧಿಕಾರಿ ಲಕ್ಷ್ಮಣ್ ಹೇಳಿದರು.

ಹತ್ತನೇ ತರಗತಿ ಉತ್ತೀರ್ಣರಾದವರು ಮೂರು ವರ್ಷದ ಕೋರ್ಸ್‌ಗೆ ಸೇರಬಹುದು. ಪಿಯುಸಿ(ವಿಜ್ಞಾನ) ಅಥವಾ ಐಟಿಐ ಓದಿರುವವರು ಎರಡು ವರ್ಷದ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. 2025-26ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರಿನ ಸಿಪೆಟ್‌ನ ಕೋರ್ಸ್‌ಗಳಿಗೆ ಆಯ್ಕೆ ಮಾಡುವ ಸಮಯದಲ್ಲಿ ಕರ್ನಾಟಕದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಇಲ್ಲಿ ವ್ಯಾಸಂಗ ಮಾಡಿದ ಪ್ರತಿ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವ-ಉದ್ಯೋಗ ಆರಂಭಿಸಿದ್ದಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ, ವಿದ್ಯಾರ್ಥಿವೇತನದ ಸೌಲಭ್ಯವೂ ಇದೆ. ಪ್ರತಿ ಸೆಮಿಸ್ಟರ್‌ಗೆ 20 ಸಾವಿರ ರೂ.ವರೆಗೆ ಖರ್ಚಾಗಲಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ವೈವಿಧ್ಯಮಯ ಬಳಕೆ, ಪ್ಲಾಸ್ಟಿಕ್ ಮೌಲ್ಡಿಂಗ್, ಪ್ಲಾಸ್ಟಿಕ್ ಸಂಸ್ಕರಣೆ, ಪ್ಲಾಸ್ಟಿಕ್ ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್ ಮರು ಬಳಕೆ ವಿಧಾನ, ಪ್ಲಾಸ್ಟಿಕ್ ಪೈಪ್‌ಗಳು ಮತ್ತು ಇನ್ನಿತರೆ ವಸ್ತುಗಳ ತಯಾರಿಕೆ, ಮಾರುಕಟ್ಟೆ, ದರ ಪರಿಷ್ಕರಣೆ ಕುರಿತಂತೆ ಕಲಿಸಿಕೊಡಲಾಗುವುದು ಎಂದರು.

ಆಟೋಮೊಬೈಲ್ ಕೈಗಾರಿಕೆಗಳು, ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳು, ಪಿವಿಸಿ ಪೈಪ್ ತಯಾರಿಕಾ ಕಂಪನಿಗಳು ಮತ್ತು ವಿದ್ಯುನ್ಮಾನ, ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು, ಆಹಾರೋದ್ಯಮ, ವೈದ್ಯಕೀಯ ಕ್ಷೇತ್ರ, ಆಗ್ರೋ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ ಕ್ಷೇತ್ರ, ಎಲೆಕ್ಟ್ರಿಕಲ್ಸ್, ಎಲೆಕ್ಟ್ರಿಕಲ್ಸ್ ಕ್ಷೇತ್ರ, ಆಹಾರೋದ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬಹುದು ಎಂದು ವಿವರಿಸಿದರು.

ಹಿರಿಯ ಸಹಾಯಕ ಮಹೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net