

ಯಲ್ಲಾಪುರ: ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಹನಾಪುರ ಅವರು ಪ್ರಸಕ್ತ ಸಾಲಿನ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ಬಾಗಲಕೋಟೆಯವರಾದ ರಮೇಶ, ಕಳೆದ 18 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024ರ ಜನವರಿಯಿಂದ ಯಲ್ಲಾಪುರದ ಇನ್ಸ್ಪೆಕ್ಟರ್ ಆಗಿದ್ದಾರೆ. ಸೇವೆಗೆ ಸೇರಿದ ದಿನದಿಂದ ಅವರ ಕಾರ್ಯದಕ್ಷತೆ ಗಮನಿಸಿ ಈ ಪದಕಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಬಾದಾಮಿಯ ನಂದಿಕೇಶ್ವರ ಗ್ರಾಮದಲ್ಲಿ 2019ರಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಿದ ಹನಾಪುರ ಅವರು, ಆರೋಪಿಗೆ ಶಿಕ್ಷೆಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ತಮ್ಮ ಕಾರ್ಯದಕ್ಷತೆಯಿಂದ 19 ಬಾರಿ ನಗದು ಪುರಸ್ಕಾರ, 8 ಬಾರಿ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಮುಖ್ಯಮಂತ್ರಿಗಳ ಬಂಗಾರದ ಪದಕವೂ ದೊರೆತಿದೆ. ಇದೀಗ ಗೃಹಮಂತ್ರಿಗಳ ದಕ್ಷತಾ ಪದಕ ಬಂದಿರುವುದು, ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ ಎಂದು ಅವರು ‘ವಿಜಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.