ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸುಪ್ರೀಂಕೋರ್ಟ್‌ಗೆ ದಾಖಲೆ ಒದಗಿಸಲಿ ಎಂದು ದಿನೇಶ್ ಗುಂಡೂರಾವ್ ಸವಾಲು

Dinesh gundoo rao
Published on

ಮಂಗಳೂರು: ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ಬಿಡುಗಡೆ ಮಾಡದೆ ಚನ್ನಪಟ್ಟಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಸುಳ್ಳು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುವ ಯತ್ನ ಮಾಡಿದ್ದಾರೆ. ನೈತಿಕತೆ ಇದ್ದರೆ, ಸುಪ್ರೀಂಕೋರ್ಟ್‌ಗೆ ಮಾಹಿತಿ ಒದಗಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.


ರಾಜ್ಯ ಸರ್ಕಾರ ತಡವಾಗಿ, ಅಸಮರ್ಪಕವಾಗಿ ಬರಗಾಲದ ವರದಿ ನೀಡಿದ್ದು, ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ ಎಂದಿದ್ದಾರೆ. ಇದಕ್ಕಿಂತ ಮಹಾ ಸುಳ್ಳು ಇನ್ನೇನು ಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


ರಾಜ್ಯ ಸರ್ಕಾರ ಅಕ್ಟೋಬರ್ ತಿಂಗಳಲ್ಲೇ ಬರಗಾಲ ನಿರ್ವಹಿಸಲು ಮಾದರಿ ಕ್ರಮಗಳನ್ನು ಕೈಗೊಂಡಿರುವುದನ್ನು ಪ್ರಸ್ತಾಪಿಸಿ, ಅದನ್ನು ಅನುಸರಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನವರಿಯಲ್ಲಿ ಕೇಂದ್ರ ಸರ್ಕಾರದ ಜತೆ ಪತ್ರ ವ್ಯವಹಾರ ನಡೆಸಿದೆ. ಆದರೆ ಕೇಂದ್ರ ಸಚಿವರು ರಾಜ್ಯಕ್ಕೆ ಬಂದು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಿ ತಮ್ಮ ವೈಫಲ್ಯ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶುಭೋದಯ ಆಳ್ವ, ಶಾಹುಲ್ ಹಮೀದ್, ನೀರಜ್‌ಪಾಲ್, ಪ್ರವೀಣ್‌ಚಂದ್ರ ಆಳ್ವ, ವಿನಯರಾಜ್, ಟಿ.ಕೆ.ಸುಧೀರ್, ಸುಹಾನ್ ಆಳ್ವ ಸುದ್ದಿಗೋಷ್ಠಿಯಲ್ಲಿದ್ದರು.


10 ವರ್ಷಗಳಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿರುವ ತೆರಿಗೆ ಆದಾಯ 12 ಲಕ್ಷ ಕೋಟಿ ರೂ.ಗಳಲ್ಲಿ ವಾಪಸ್ ಬಂದಿರುವುದು 2.29 ಲಕ್ಷ ಕೋಟಿ ರೂ. ಮಾತ್ರ. ಪ್ರತಿಯೊಬ್ಬ ಕನ್ನಡಿಗ ಜಿಎಸ್‌ಟಿ ರೂಪದಲ್ಲಿ 13,428 ರೂ. ಕಟ್ಟುತ್ತಾರೆ. ಅತಿಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಅತಿ ಕಡಿಮೆ ತೆರಿಗೆ ಪಾಲು ಮಾತ್ರವಲ್ಲ, ಹಣಕಾಸು ಆಯೋಗದ ಶಿಫಾರಸಿನ ಹೊರತಾಗಿಯೂ ಸಿಗುವ ವಿಶೇಷ ಅನುದಾನ ಅತ್ಯಲ್ಪ ಪ್ರಮಾಣದಲ್ಲಿರಬೇಕಾದರೆ ಇದು ಕರ್ನಾಟಕಕ್ಕೆ ಅನ್ಯಾಯವಲ್ಲದೆ ಮತ್ತೇನು? ಇದನ್ನು ನಾವು ಪ್ರಶ್ನಿಸಬೇಡವೇ
ದಿನೇಶ್ ಗುಂಡೂರಾವ್
ದ.ಕ. ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net