ಬೆಳೆ ಹಾನಿ ಪರಿಶೀಲಿಸಿದ ಕೇಂದ್ರ ತಂಡ ; ತುಮಕೂರು ಜಿಲ್ಲೆಯ ಹಲವೆಡೆ ಪ್ರವಾಸ

17TMK_Kendra_Tanda 4
Published on

ತುಮಕೂರು: ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಕೇಂದ್ರ ತಜ್ಞರ ತಂಡ ಪ್ರವಾಸ ನಡೆಸಿತು.

ಕೇಂದ್ರದ ಹಣಕಾಸು ನಿರ್ವಹಣಾ, ನಿಯಂತ್ರಣಾಧಿಕಾರಿ ಸುಶೀಲ್ ಪಾಲ್ ನೇತೃತ್ವದ ತಂಡದಲ್ಲಿ ಕೇಂದ್ರದ ಕೃಷಿ ನಿರ್ದೇಶಕ ಡಾ. ಸುಭಾಷ್‌ಚಂದ್ರ, ರಾಜ್ಯದ ಅಪರ ಕೃಷಿ ನಿರ್ದೇಶಕ ಬಿ.ಶಿವರಾಜ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಇದ್ದರು. ಶುಕ್ರವಾರ ಬೆಳಗ್ಗೆಯೇ ಪ್ರವಾಸ ಆರಂಭಿಸಿದ ತಂಡ ಆರಂಭದಲ್ಲಿ ತುಮಕೂರು ತಾಲೂಕು ಗೂಳೂರಿನಲ್ಲಿ ವಿಜಯಕುಮಾರ್ ಹಾಗೂ ಎಕೆ ಕಾವಲ್‌ನಲ್ಲಿ ನೂರ್ ಉನ್ನಿಸಾ ಎಂಬುವವರ ಹೊಲದಲ್ಲಿ ರಾಗಿ, ಅವರೆ ಬೆಳೆ ವೀಕ್ಷಿಸಿ, ರೈತರಿಂದಲೇ ಮಾಹಿತಿ ಪಡೆಯಿತು. ಜಿಲ್ಲಾಡಳಿತ ಕೂಡ ಡ್ರೋಣ್ ಕ್ಯಾಮರಾದಲ್ಲಿ ಸೆರೆಹಿಡಿದ ೆಟೋಗಳನ್ನಿಟ್ಟು ನಷ್ಟದ ಮಾಹಿತಿ ನೀಡಿತು.

ಗೂಳೂರು ಅಮಾನಿಕೆರೆ, ಎ.ಕೆ.ಕಾವಲು, ಎಂ.ಎಚ್.ಪಟ್ಟಣ, ಬಾಗೂರು, ನಿಟ್ಟೂರು, ಕಡಬ, ರಾಜನಹಳ್ಳಿ ಹಾಗೂ ಕಡಬ ಅಮಾನಿಕೆರೆ ಅಚ್ಚುಕಟ್ಟು ಭಾಗದಲ್ಲಿಯೂ ತಂಡ ಮಾಹಿತಿ ಪಡೆಯಿತು. ಜಿಲ್ಲೆಯಲ್ಲಿ 1.53ಲಕ್ಷ ಹೆ. ಪ್ರದೇಶದಲ್ಲಿ ಬೆಳೆದಿರುವ ರಾಗಿಯಲ್ಲಿ ಶೇ.80 ನಷ್ಟವಾಗಿದ್ದು, 1.30 ಲಕ್ಷ ಹೆ. ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 1150 ಮನೆ ಸಂಪೂರ್ಣ ನಾಶವಾಗಿವೆ, 1700ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿ ಹಾಗೂ ಮೂಲಸೌಕರ್ಯ ಕಾಮಗಾರಿಗಳೂ ಹಾಳಾಗಿರುವ ಬಗ್ಗೆ ಕೇಂದ್ರದ ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.

ಪ್ರವಾಸಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯಲ್ಲಿ ಹಾನಿಯಾಗಿರುವ ಪ್ರದೇಶಗಳನ್ನು ಕೇಂದ್ರ ತಂಡಕ್ಕೆ ತೋರಿಸಲಾಯಿತು. ಈ ಸಂದರ್ಭದಲ್ಲಿ ತಂಡದ ಸದಸ್ಯರೇ ಕೆಲವು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಪ್ರವಾಸ ತೆರಳಲು ನಿರ್ಧರಿಸಿದರು. ರೈತರೊಂದಿಗೆ ಹಾಗೂ ಮನೆ ಕಳೆದುಕೊಂಡವರೊಂದಿಗೆ ಸಾವಧಾನದಿಂದ ಮಾತನಾಡಿದರು.

ಗುಬ್ಬಿ ಎಂ.ಎಚ್.ಪಟ್ಟಣದಲ್ಲಿ ಮನೆ ಹಾಳಾದ ಕುಟುಂಬದ ಜತೆ ಮಾತನಾಡಿ, ಪರಿಹಾರ ತಲುಪಿರುವ ಬಗ್ಗೆ ಮಾಹಿತಿ ಪಡೆದರು. ರೈತ ಮುಖಂಡ ಗೋವಿಂದರಾಜು ಅಧಿಕಾರಿಗಳಿಗೆ ಹೆಚ್ಚು ಪರಿಹಾರ ನೀಡುವಂತೆ ಮನವಿ ಮಾಡಿದರು. ಭವಿಷ್ಯದಲ್ಲಿ ಜಾನುವಾರುಗಳ ಮೇವಿಗೆ ಅಭಾವ ಉಂಟಾಗಲಿದ್ದು ಅದಕ್ಕೆ ಪರಿಹಾರ ಒದಗಿಸಬೇಕು, ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಒಮ್ಮೆ ಉಳುಮೆಗೂ ಸಾಕಾಗುವುದಿಲ್ಲ ಎಂದು ಅಳಲು ತೋಡಿಕೊಂಡರು.

ಎಲ್ಲೆಲ್ಲಿ ಪರಿಶೀಲನೆ?: ಕೇಂದ್ರ ತಂಡ ಮೊದಲಿಗೆ ತುಮಕೂರು ತಾಲೂಕು ಗೂಳೂರು ಅಮಾನಿಕೆರೆಯ ವಿಜಯಕುಮಾರ್ ಮತ್ತು ಕೆ.ಎಂ. ಗಂಗಾಧರಯ್ಯ ಹಾಗೂ ಎ.ಕೆ.ಕಾವಲ್‌ನ ನೂರ್ ಉನ್ನಿಸಾ ಅವರ ಜಮೀನಿಗೆ ಭೇಟಿ ನೀಡಿ ಹಾಳಾದ ರಾಗಿ ವೀಕ್ಷಿಸಿತು. ನಂತರ ಗುಬ್ಬಿ ತಾಲೂಕು ಎಂ.ಎಚ್.ಪಟ್ಟಣಕ್ಕೆ ಭೇಟಿ ನೀಡಿ ಕೆರೆ ನೀರಿನಿಂದ ರಾಗಿ, ಹೂ, ತರಕಾರಿ ಬೆಳೆ ಹಾಳಾಗಿರುವುದನ್ನು ನೋಡಿತು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಬೆಳೆ ಪರಿಹಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಎಂ.ಎಚ್.ಪಟ್ಟಣದಲ್ಲಿ ಮಳೆಯಿಂದ ಹಾಳಾದ ನರಸಿಂಹಮೂರ್ತಿ, ವೆಂಕಟಲಕ್ಷ್ಮಮ್ಮ ಹಾಗೂ ಹನುಮಂತಯ್ಯ ಅವರ ಮನೆಗಳಿಗೆೆ ಭೇಟಿ ನೀಡಿ ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿತು. ಬಾಗೂರು ಬಡಾವಣೆಯ ರೈತರ ಜಮೀನಿಗೆ ಭೇಟಿ ನೀಡಿ ಕೆರೆಯ ನೀರಿಂದ ಹಾಳಾದ ರಾಗಿ ಬೆಳೆ ಪರಿಶೀಲಿಸಿದಾಗ ಸ್ಥಳೀಯ ರೈತರಾದ ರಾಮಯ್ಯ, ಗೋವಿಂದಶೆಟ್ಟಿ, ಗುರಪ್ಪ ಅಳಲು ತೋಡಿಕೊಂಡರು. ಹಾಳಾದ 3 ಸೇತುವೆ ಹಾಗೂ 350 ಮೀ. ರಸ್ತೆ ವೀಕ್ಷಿಸಿ ಅಧಿಕಾರಿಗಳಿಗೆ ಶೀಘ್ರ ದುರಸ್ತಿ ಮಾಡಲು ಸೂಚಿಸಿದರು. ಕಡಬ ಸುತ್ತಮುತ್ತಲಿನ ಜಮೀನಿಗೆ ಭೇಟಿ ನೀಡಿ ಜಯಣ್ಣ ಹಾಗೂ ಶಿವಶಂಕರಯ್ಯ ಜಮೀನಿನಲ್ಲಿ ಕೆರೆ ಕೋಡಿ ನೀರು ನಿಂತು ಹಾನಿಗೊಳಗೊಂಡ ಅಡಕೆ ಸಸಿ ಹಾಗೂ ಬಾಳೆ ವೀಕ್ಷಿಸಿದರು. ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಿಸಿದ ತಂಡ ಗುಬ್ಬಿ ತಾಲೂಕಿನಲ್ಲಿ ಪ್ರವಾಸ ಮುಂದುವರಿಸಿ ರಾಜನಹಳ್ಳಿಯಲ್ಲಿ ಸಂಪೂರ್ಣ ಹಾಳಾದ ರಸ್ತೆ ಹಾಗೂ ಸೇತುವೆ ವೀಕ್ಷಿಸಿತು.

ಎರಡು ತಂಡವಾಗಿ ಹಾನಿಗೊಳಗಾದ ಪ್ರದೇಶಗಳ ಮಾಹಿತಿ ಪಡೆದಿದ್ದೇವೆ, ರಾಜ್ಯ ಸರ್ಕಾರ ಕೂಡ ವರದಿ ನೀಡಿದ್ದು ಇದನ್ನು ಪರಿಶೀಲಿಸಿ ಹಾನಿಯ ಪ್ರಮಾಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಮ್ಮ ವರದಿ ಸಲ್ಲಿಸುತ್ತೇವೆ. ಸುಶೀಲ್ಪಾಲ್ ಕೇಂದ್ರ ತಂಡದ ಮುಖ್ಯಸ್ಥ ರಾಗಿ, ಶೇಂಗಾ, ಸೋಯಾ ಮತ್ತಿತರ ಬೆಳೆ ನಾಶವಾಗಿದೆ. ತರಕಾರಿ, ಹೂವಿನ ಬೆಳೆ ಕೂಡ ಹಾಳಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಕ್ಕೆ ಎಲ್ಲ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ 1281ಕೋಟಿ ರೂ. ಬೆಳೆ ನಾಶವಾಗಿದ್ದು ಈ ಬಗ್ಗೆ ವರದಿ ನೀಡಲಾಗಿದೆ. ಆರ್.ಮನೋಜ್ರಾಜನ್, ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net