

ಹುಬ್ಬಳ್ಳಿ: ದೇಶದಲ್ಲಿ 2014ರವರೆಗೆ ಅಧಿಕಾರ ನಡೆಸಿದ ಎಲ್ಲರೂ ಸೇರಿ 52 ಲಕ್ಷ ಕೋಟಿ ರೂ. ಸಾಲ ಮಾಡಿದ್ದರೆ, ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 120 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಸಾಲ ಮಾಡಿ ತುಪ್ಪ ತಿನ್ನುತ್ತಿರುವವರು ಯಾರು ಎಂಬುದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2019ರಲ್ಲಿ ಅಧಿಕಾರ ಬಿಟ್ಟುಕೊಡುವಾಗ 2.52 ಲಕ್ಷ ಕೋಟಿ ರೂ. ಸಾಲ ಇತ್ತು. ಬಳಿಕ ಬಿಜೆಪಿಯವರು 3 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ನೆಲ, ಜಲ, ಭಾಷೆ, ಹಾಗೂ ರಾಜ್ಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ, ಬಂದ್ಗೆ ಕರೆ ನೀಡಿವೆ. ಮಳೆ ಬರದಿರುವುದು ನಮ್ಮ ತಪ್ಪಾ? ಇದು ಪ್ರಕೃತಿ ವಿಕೋಪ. ಕಾವೇರಿಯಲ್ಲಿ ನೀರು ಇಲ್ಲದಿರುವುದು ಸುಪ್ರೀಂ ಕೋರ್ಟ್ಗೆ ಗೊತ್ತಿಲ್ಲವಾ? ಇಂಥ ಸಂಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕಿತ್ತು. ಅವರ್ಯಾಕೆ ಮೌನ ವಹಿಸಿದ್ದಾರೆ? ನಾವೇನೂ ಮೈತ್ರಿ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಸಮರ್ಥಿಸಿಕೊಂಡರು.
ಅನವಶ್ಯಕ ಪ್ರಸ್ತಾಪ:
ರಾಜ್ಯದಲ್ಲಿ ಸಮರ್ಥ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ. ಹೊಸದಾಗಿ ಡಿಸಿಎಂ ಸ್ಥಾನ ಸೃಷ್ಟಿಸುವುದು ಅನವಶ್ಯಕ ಪ್ರಸ್ತಾಪ. ಹಾಗೇನಾದರೂ ಹೆಚ್ಚುವರಿ ಡಿಸಿಎಂ ಮಾಡಬೇಕಾಗುತ್ತದೆ ಎಂದೆನಿಸಿದರೆ ಹೈ ಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.