ಕೇಂದ್ರ ಸರ್ಕಾರ ಪತನ ಸಾಧ್ಯತೆ

santosh laad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಂದಿನ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಪತನವಾಗುವ ಸಾಧ್ಯತೆಗಳಿವೆಯೇ ಹೊರತು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೊಷಣೆಯಾಗಿರುವ ಜಮ್ಮು- ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಮುಂಬರುವ ಮಹಾರಾಷ್ಟ್ರ ಹಾಗೂ ಬಿಹಾರ ಚುನಾವಣೆಯಲ್ಲೂ ಬಿಜೆಪಿ ಸೋಲಬಹುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿಯವರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಅವರದ್ದು ಬರೀ ಅದೇ ಕೆಲಸವಾಗಿದೆ. ನಾವು 136 ಶಾಸಕರಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬ ಕಾಂಗ್ರೆಸ್ ನಾಯಕರ ಹಾಗೂ ಸಚಿವರ ಹೇಳಿಕೆ ವೈಯಕ್ತಿಕವಾದುದು. ಈ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತದೆಯೋ ಹಾಗೇ ನಡೆಯುತ್ತದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ಬಗ್ಗೆ ಸುಮ್ಮನೆ ಆರೋಪ ಮಾಡುತ್ತಾರೆ. ಜನಧನ್ ಯೋಜನೆ, ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವುದಿಲ್ಲ. ವಿಮಾನ ನಿಲ್ದಾಣ, ರಾಮಮಂದಿರ ಕಟ್ಟಡ ಸೋರುತ್ತಿರುವ ಬಗ್ಗೆ ಏನು ಹೇಳುತ್ತಾರೆ ? ಮುಂಬೈನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ನೆಲಕಚ್ಚಿದಕ್ಕೆ ಯಾರು ಹೊಣೆ? ಇದಕ್ಕೆಲ್ಲ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉತ್ತರ ಕೊಡುವುದಿಲ್ಲ ಎಂದು ಟೀಕಿಸಿದರು.

ಕಳೆದ ವರ್ಷ ಕೇಂದ್ರ ಸರ್ಕಾರ, ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿತ್ತು. ಇದೀಗ ಅಕ್ಕಿ ಕೊಟ್ಟರೂ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳುತ್ತಿದ್ದಾರೆ. ಇದೀಗ ಅಕ್ಕಿ ಕೊಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಲ್ಹಾದ ಜೋಶಿ ಅವರು ಲಿಖಿತವಾಗಿ ತಿಳಿಸಲಿ. ಹಾಗೇ ಕಳೆದ ವರ್ಷ ಯಾಕೆ ಕೊಟ್ಟಿಲ್ಲ ಎಂಬುದಕ್ಕೂ ಅವರು ಉತ್ತರ ಕೊಡಲಿ. ಫುಡ್ ಸೆಕ್ಯೂರಿಟಿ ಬಿಲ್ ತಂದವರು ಅಂದಿನ ಪ್ರಧಾನಿ ಮನಮೋಹನ ಸಿಂಗ್. ಈಗ ನರೇಂದ್ರ ಮೋದಿ ಅವರು ತಾವು 80 ಕೋಟಿ ಜನರಿಗೆ ಅಕ್ಕಿ ಕೊಡುತ್ತೇವೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net