ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 784 ಕೋಟಿ ಅನುದಾನ

PJ NEW
Published on

ಹುಬ್ಬಳ್ಳಿ : ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯ ಸೇತುಬಂಧನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 784 ಕೋಟಿ ರೂ. ವೆಚ್ಚದಲ್ಲಿ 22 ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಈ ಅನುಮೋದನೆಯಲ್ಲಿ ಧಾರವಾಡ ಲೋಕಸಭೆ ಕ್ಷೇತ್ರದ ಎರಡು ಕಾಮಗಾರಿಗಳೂ ಸೇರಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಸಚಿವ ಜೋಶಿ, ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸುತ್ತಿರುವ ಅಪಘಾತ ತಡೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಮೇಲ್ಸೇತುವೆಗಳನ್ನು ನಿರ್ವಿುಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಧಾರವಾಡ ಲೋಕಸಭೆ ಕ್ಷೇತ್ರದ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್ ನಂ. 19ಕ್ಕೆ ಮೇಲ್ಸೇತುವೆ ಹಾಗೂ ಅಳ್ನಾವರ ಪಟ್ಟಣದ ರೈಲ್ವೆ ಅಂಡರ್ ಬ್ರಿಡ್ಜ್ ತುಂಬ ಕಿರಿದಾಗಿದ್ದು, ಅದರ ಅಗಲೀಕರಣಕ್ಕೆ ವಿನಂತಿಸಿದ್ದೆ. ನನ್ನ ವಿನಂತಿಯ ಮೇರೆಗೆ ನಿತಿನ್ ಗಡ್ಕರಿಯವರು ಈ ಎರಡೂ ಕಾಮಗಾರಿಗಳಿಗೆ ತಲಾ 30 ಕೋಟಿಯಂತೆ ಒಟ್ಟು 60 ಕೋಟಿ ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

ಇದರಿಂದ ಖಾನಾಪೂರ-ಅಳ್ನಾವರ-ಹಳಿಯಾಳ ಸಂರ್ಪಸುವ ರಾಜ್ಯ ಹೆದ್ದಾರಿಯಲ್ಲಿ ಸಂಪರ್ಕ ವ್ಯವಸ್ಥೆ ಸುಗಮಗೊಳ್ಳಲಿದೆ. ಇದರ ಜತೆಗೆ ಅಳ್ನಾವರ ಪಟ್ಟಣದ ನಾಗರಿಕರಿಗೆ ನಿತ್ಯದ ಸಂಚಾರದಲ್ಲಿ ಆಗುತ್ತಿದ್ದ ಅಡೆತಡೆ ನಿವಾರಣೆಯಾಗಲಿದೆ. ಹಾಗೆಯೇ ಅಣ್ಣಿಗೇರಿ ಪಟ್ಟಣದ ಒವರ್ ಬ್ರಿಡ್ಜ್ ನಿರ್ವಣದಿಂದ ಅಣ್ಣಿಗೇರಿ-ಹಳ್ಳಕೇರಿ-ಇಬ್ರಾಹಿಂಪೂರ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ರೈಲ್ವೆ ಗೇಟ್ ರಹಿತವಾಗಿ ಯಾವುದೇ ಅಡತಡೆ ಇಲ್ಲದೇ ಸಂಚರಿಸಬಹುದು ಎಂದು ತಿಳಿಸಿದ್ದಾರೆ.

ಈ ಎರಡು ಬೇಡಿಕೆಗಳು ಬಹುದಿನಗಳಿಂದ ಇದ್ದು, ಅವುಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಡಿದೆ. 24 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ರಾಜ್ಯದ ಲೋಕೋಪಯೋಗಿ ಇಲಾಖೆಯ ರಾಷ್ತ್ರೀಯ ಹೆದ್ದಾರಿ ವಿಭಾಗಕ್ಕೆ ತಿಳಿಸಿದ್ದು, ಇಲಾಖೆಯು ಈ ಕಾಮಗಾರಿಗಳನ್ನು ಕೈಗೊಳ್ಳಲಿದೆ. ಈ ಕಾಮಗಾರಿಯನ್ನು ಕೈಗೊಳ್ಳಲು ಕೂಡಲೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಲೋಕೋಪಯೋಗಿ ಸಚಿವರಿಗೆ ಕೋರುವುದಾಗಿ ಸಚಿವ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net