

ಮೈಸೂರು: ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಎಸ್. ಹಂಸಿನಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿಧಿ ಪ್ರಾಯಸ್ ಅನುದಾನಕ್ಕೆ ಆಯ್ಕೆಗೊಂಡಿದ್ದಾರೆ.
‘ಉತ್ತಮ ಆರೋಗ್ಯಕ್ಕಾಗಿ ವಿವಿಧ ಔಷಧೀಯ ಅಣಬೆಗಳ ಸೇವನೆ’ ವಿಷಯದ ಕುರಿತು ಹಂಸಿನಿ ನಡೆಸುತ್ತಿರುವ ಸಂಶೋಧನೆಯು ನಿಧಿ ಪ್ರಾಯಸ್ ಅನುದಾನ ಯೋಜನೆಗೆ ಆಯ್ಕೆಯಾಗಿದ್ದು, ಇದು ಒಟ್ಟು 8 ಲಕ್ಷ ರೂ.ಮೊತ್ತದ ಯೋಜನೆಯಾಗಿದೆ. ಪ್ರಾಧ್ಯಾಪಕರಾದ ಡಾ. ಟಿ.ಆರ್. ಶ್ರೀನಿವಾಸ ಮತ್ತು ಡಾ.ಎಂ.ಡಿ.ಪಂಡರೀಶ್ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಹಂಸಿನಿ ಸಂಶೋಧನೆ ಕೈಗೊಂಡಿದ್ದಾರೆ.
ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು 2023ರಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಇನ್ನೋವಟ್ರೇಸ್’ ಕಾರ್ಯಕ್ರಮದಲ್ಲಿ ಎಸ್. ಹಂಸಿನಿ ಭಾಗವಹಿಸಿ ಹೆಲ್ತ್‌ಕೇರ್ ಸ್ಟಾರ್ಟ್‌ಅಪ್ ಯೋಜನೆಯ ಕಲ್ಪನೆಯನ್ನು ಮಂಡಿಸಿ ದ್ವಿತೀಯ ಸ್ಥಾನ ಪಡೆದಿದ್ದರು.