

ಮೈಸೂರು: ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಬಿಂಬಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಅಧಿಕಾರಿಗಳು, ರಾಜಕಾರಣಿಗಳು ಹಿಂದಿ ಭಾಷೆಯ ದಾಸ್ಯಕ್ಕೆ ಒಳಗಾಗಿದ್ದಾರೆ ಎಂದು ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಕಿಡಿಕಾರಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ವಿವಿಯ ಘಟಿಕೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರದ ಹಲವು ಭಾಷೆಗಳ ಪೈಕಿ ಹಿಂದಿ ಕೂಡ ಒಂದು ಭಾಷೆಯಾಗಿದ್ದು, ಹಿಂದಿ ರಾಷ್ಟ್ರ ಭಾಷೆ ಮಾನ್ಯತೆ ಪಡೆದಿಲ್ಲ. ಆದರೆ, ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸಿ ಜನರಲ್ಲಿ ಗೊಂದಲ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿ ಹೇರಿಕೆಯನ್ನು ತಮಿಳುನಾಡಿನವರು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ. ತಮಿಳುನಾಡಿನವರ ಮಾದರಿಯಲ್ಲಿ ಕನ್ನಡಿಗರು ಸಹ ಕನ್ನಡ ಭಾಷೆಯ ಉಳಿವಿಗೆ, ಹಿಂದಿ ಹೇರಿಕೆ ವಿರುದ್ಧ ಹೋರಾಡುವ ಅವಶ್ಯಕತೆ ಇದೆ. ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಮಾತೃಭಾಷೆಯ ಬೆಳವಣಿಗೆ ದೃಷ್ಟಿಯಲ್ಲಿ ಮಾದರಿಯಾಗಿವೆ ಎಂದರು.
ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರಬೇಕು ಎಂದು ಹಲವಾರು ಭಾಷಾ ತಜ್ಞರು, ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಮಕ್ಕಳ ಮನಸ್ಸು ಅರಳುತ್ತದೆ. ಆದರೆ, ಪಾಲಕರ ಆಂಗ್ಲಭಾಷಾ ವ್ಯಾಮೋಹವು ಬಂಡವಾಳಶಾಹಿಗಳಿಗೆ ವರದಾನವಾಗಿದೆ ಎಂದು ಹೇಳಿದರು.