

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಹಾಗೂ ಎನ್.ಡಿ.ಸುಂದರೇಶ್ ಸ್ಮರಣಾರ್ಥ ಡಿಸಿ ಕಚೇರಿ ಎದುರು ರೈತ ಸಂಘದ ಪದಾಧಿಕಾರಿಗಳು ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಿದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರೈತ ವಿರೋಧಿ ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕಣ್ಣಾಮುಚ್ಚಾಲೆ ಆಟ ಬಿಟ್ಟು ಎಲ್ಲರಿಗೂ ತಿಳಿಯುವಂತೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ರೈತ ಕಾನೂನುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ನಿಜವಾಗಿಯೂ ಆ ಕಾಯ್ದೆಗಳಲ್ಲಿ ರೈತಪರ ಉದ್ದೇಶಗಳಿದ್ದರೆ ಜನರಿಗೆ ತಿಳಿಸಬೇಕು. ಇದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನು ಕುರಿತು ಮಾತನಾಡಬೇಕು ಎಂದರು.
ಕಾನೂನುಗಳ ಸುಧಾರಣೆಯಾಗಬೇಕೇ ಹೊರತು ಬದಲಾವಣೆಯಾಗಬೇಕಿಲ್ಲ. ಗೃಹ ಸಚಿವ ಅಮಿತ್ ಶಾ ಕೂಡ ಕಾನೂನನ್ನು ಸುಧಾರಣೆ ಮಾಡುತ್ತೇವೆಂದು ಹೇಳಿದ್ದಾರೆ. ಸಂಸತ್ನಲ್ಲಿ ಇದನ್ನು ಸ್ಪಷ್ಟಪಡಿಸಿ ಕಾನೂನಿನಲ್ಲಿ ಏನು ಸುಧಾರಣೆ ಆಗಿದೆ ಎಂಬುದನ್ನು ವಿವರಿಸಬೇಕು. ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡರಾದ ಯಶವಂತರಾವ್ ಘೊರ್ಪಡೆ, ತಾಲೂಕು ಅಧ್ಯಕ್ಷ ಸಣ್ಣರಂಗಪ್ಪ, ಪ್ರಧಾನ ಕಾರ್ಯದರ್ಶಿ ಪಾಂಡುರಂಗಪ್ಪ, ಪರಮೇಶ್ವರ್, ಜಗದೀಶ್ ನಾಯ್್ಕ ವೀರೇಶ್ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು. ಬಿಜೆಪಿ ಕಾರ್ಯಕರ್ತರ ಬಾಯಲ್ಲಿ ಹೇಳಿಕೆ ಕೊಡಿಸುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಶ್ವೇತಪತ್ರ ಹೊರಡಿಸಬೇಕು.
| ಕೆ.ಟಿ.ಗಂಗಾಧರ್, ರೈತ ಸಂಘದ ಮುಖಂಡ