

ಮೈಸೂರು: ಅನಧಿಕೃತವಾಗಿ ಬೆಳೆದಿರುವ ತಂಬಾಕನ್ನು ದಂಡರಹಿತವಾಗಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ತಾಲೂಕು ಸೇರಿದಂತೆ ಮೈಸೂರು ಜಿಲ್ಲೆಯ ಇತರೆಡೆ ಅಧಿಕೃತ ತಂಬಾಕು ಬೆಳೆಗಾರರು ಹೆಚ್ಚುವರಿಯಾಗಿ ತಂಬಾಕು ಬೆಳೆದಿದ್ದಾರೆ. ಜತೆಗೆ ಅನಧಿಕೃತ ಬೆಳೆಗಾರರು ಸಹ ತಂಬಾಕನ್ನು ಬೆಳೆದಿದ್ದಾರೆ.
ಹಾಗಾಗಿ ಈ ಎಲ್ಲ ತಂಬಾಕನ್ನು ದಂಡರಹಿತವಾಗಿ ಕರ್ನಾಟಕ ರಾಜ್ಯದ ತಂಬಾಕು ಮಂಡಳಿಯ ಹರಾಜು ವೇದಿಕೆಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ಬೆಳೆದಿರುವ ಎಲ್ಲ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.