

ಗಂಗಾವತಿ: ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ದೊಡ್ಡದಾಗಿದ್ದು, ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದು ತಾಪಂ ಇಒ ಲಕ್ಷ್ಮೀದೇವಿ ಯಾದವ್ ಹೇಳಿದರು.
ತಾಪಂ ಆವರಣದ ಶಾಂತಿ ಉದ್ಯಾನದಲ್ಲಿ ಕೇಂದ್ರ ಸರ್ಕಾರದ ನನ್ನ ಮಣ್ಣು ನನ್ನ ದೇಶ ಪರಿಕಲ್ಪನೆಯ ಅಮೃತ ಕಲಶ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ 18 ಗ್ರಾಪಂ ವ್ಯಾಪ್ತಿಯಲ್ಲಿ ಅಭಿಯಾನ ಕೈಗೊಂಡಿದ್ದು, ಸಂಗ್ರಹಿತ ಮಣ್ಣನ್ನು ಕಲಶದಲ್ಲಿಡುವ ಮೂಲಕ ಜಿಲ್ಲಾಡಳಿತದ ಮೂಲಕ ದಿಲ್ಲಿಗೆ ರವಾನಿಸಲಾಗುವುದು. ಅಮೃತ ಮಹೋತ್ಸವ ನಿಮಿತ್ತ ಅಭಿಯಾನ ಹಮ್ಮಿಕೊಂಡಿದ್ದು, ಯುವ ಪೀಳಿಗೆ ಹಾಗೂ ಮಕ್ಕಳಲ್ಲಿ ದೇಶ ಮತ್ತು ಮಣ್ಣಿನ ಬಗ್ಗೆ ಅಭಿಮಾನ ಮೂಡಿಸಲಾಗುವುದು ಎಂದು ಹೇಳಿದರು.
ವಸುಧಾ ವಂದನ ವಾಟಿಕಾ ಕಾರ್ಯಕ್ರಮದಡಿ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡಲಾಗಿದೆ. ಸಂಗ್ರಹಿತ ಮಣ್ಣು ವೀರ ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವೀರಯೋಧರಿಗೆ ಸಮರ್ಪಣೆಯಾಗಲಿದೆ ಎಂದರು.
ನರೇಗಾ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ವ್ಯವಸ್ಥಾಪಕ ಶಾಂತವೀರಯ್ಯ, ಎಸ್‌ಕೆಎನ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಸೆಲ್ವರಾಜ್, ತಾಪಂ ಸಿಬ್ಬಂದಿ ರಾಘವೇಂದ್ರ, ಸುಮಂಗಲಾ, ರಂಗಮ್ಮ, ನಾಗರಾಜ್ ಗಂಗನಾಳ್, ವೀರನಗೌಡ, ಶ್ಯಾಮಸುಂದರ್, ಬಸವರಾಜ ಜಟಗಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಭಾಗವಹಿಸಿದ್ದರು.