

ಶಿವಮೊಗ್ಗ: ರಾಜ್ಯದ ಪಾಲಿನ ಜಿಎಸ್‌ಟಿಯನ್ನು ಕೇಂದ್ರದಿಂದ ಬಿಡುಗಡೆ ಮಾಡಿಸುವಲ್ಲಿ ರಾಜ್ಯ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಕರ್ನಾಟಕಕ್ಕೆ ತೆರಿಗೆ ಪಾಲಿನ ಹಣ ನೀಡಬೇಡಿ ಎಂದು ಪ್ರಧಾನಿ ಹಾಗೂ ವಿತ್ತ ಸಚಿವರಿಗೆ ಹೇಳಿದವರೇ ಬಿಜೆಪಿ ಸಂಸದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದೂರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಕಡಿತಗೊಂಡಿದೆ. ಆದರೆ ಕೇಂದ್ರ ಸರ್ಕಾರ ನಮ್ಮಿಂದ ಕೊಳ್ಳೆ ಹೊಡೆಯುವುದು ತಪ್ಪಿಲ್ಲ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ರಾಜ್ಯದ ಪಾಲಿನ ಜಿಎಸ್‌ಟಿ ಬಿಡುಗಡೆಯಾಗಲೇ ಇಲ್ಲ. ನಮ್ಮ ರಾಜ್ಯದ ಹಣವನ್ನು ಬೇರೆ ರಾಜ್ಯಗಳಿಗೆ ಕೊಟ್ಟರೆ ಅನ್ಯಾಯವನ್ನು ನಾವು ಹೇಗೆ ಸಹಿಸಿಕೊಳ್ಳುವುದು ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. 100 ಕೋಟಿ ರೂ. ಪರಿಹಾರ ನೀಡಬೇಕಿದೆ. ಇದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ಕೊಳೆರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಅಡಕೆಗೆ ಸಂಬಂಧಿಸಿದ ತೆರಿಗೆ ಹಣವನ್ನು ನೀಡಿದರೂ ಸಾಕು ಎಂದರು.
ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಬಿಜೆಪಿಯಿಂದ ಎಲ್ಲ ವಿಷಯಗಳಲ್ಲೂ ಪ್ರಜೆಗಳಿಗೆ ಮೋಸವಾಗುತ್ತಿದೆ. ಕಾಂಗ್ರೆಸ್ ಯೋಜನೆಗಳನ್ನು ಕಾಪಿ ಮಾಡಿ ಅದನ್ನು ನಾವು ಮಾಡಿದ್ದು ಎಂದು ಬಿಜೆಪಿಯವರು ಹೇಳುತ್ತಾರೆ. ನಾವು ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಈಡೇರಿಸಿಲ್ಲ. ಬಿಜೆಪಿಯವರು ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಮತಗಳ್ಳತನ ಮಾಡಿರುವುದು ದೇಶದ ಪ್ರಜಾಪ್ರಭುತ್ವದಲ್ಲಿ ನಡೆದ ದೊಡ್ಡ ದುರಂತ ಎಂದು ದೂರಿದರು.