ನಿರುದ್ಯೋಗ ನಿವಾರಣೆಗೆ ಕೇಂದ್ರ ಸರ್ಕಾರ ಕ್ರಮ: ಸಚಿವ ವಿ.ಸೋಮಣ್ಣ ಹೇಳಿಕೆ

7
Published on

ಮೈಸೂರು: ನಿರುದ್ಯೋಗ ನಿವಾರಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ಈ ವರ್ಷ ಭಾರತೀಯ ರೈಲ್ವೆ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಭಾರತೀಯ ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ದೇಶದಲ್ಲಿ ಮಾನವ ಸಂಪನ್ಮೂಲ ಇದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಹಾಗಾಗಿ ಪ್ರಧಾನಿ ನರೇಂದ್ರಮೋದಿ ಅವರು ವಿಕಸಿತ ಭಾರತದ ಭಾಗವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ ಎಂದು ಹೇಳಿದರು.

ಉದ್ಯೋಗ ಮೇಳದ ಮೂಲಕ ಹಂತ, ಹಂತವಾಗಿ ನೇಮಕಾತಿ ನಡೆಯುತ್ತಿದೆ. ಇಂದು ದೇಶದಲ್ಲಿ 51 ಸಾವಿರ ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಲಾಗುತ್ತಿದೆ. ಮೈಸೂರಿನಲ್ಲಿ 172 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ವಿಶ್ವದಲ್ಲಿಯೇ ದೊಡ್ಡ ವ್ಯವಸ್ಥೆಯಾದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ಬಾರಿ 60 ಸಾವಿರ ನೇಮಕಾತಿ ನಡೆಯಲಿದೆ. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಂಚೆ ಇಲಾಖೆಯಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುತ್ತಿವೆ ಎಂದು ವಿವರಿಸಿದರು.

2014ರಿಂದ ರಾಷ್ಟ್ರೀಯ ರೋಜಗಾರ್ ಯೋಜನೆ ಜಾರಿಗೊಳಿಸಿ 12 ಆವೃತ್ತಿ ಪೂರೈಸುವ ಮೂಲಕ ಇಲ್ಲಿಯವರೆಗೆ 14 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಉದೋಗಗಳನ್ನು ನೀಡಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ 2014 ರಿಂದ ಇಲ್ಲಿಯವರೆಗೆ ಮಿಶನ್ ಮೋಡ್‌ನಲ್ಲಿ 5.2 ಲಕ್ಷ ಉದ್ಯೋಗಳನ್ನು ನೀಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಜನ ಧನ್ ಯೋಜನೆಯಡಿ ಸೌಲಭ್ಯ, ಆರೋಗ್ಯ ಸೌಲಭ್ಯ ಹೆಚ್ಚಿಸಲು ಆಯುಷ್ಮಾನ್ ಭಾರತ್ ಯೋಜನೆ, ಮುದ್ರಾ ಯೋಜನೆ, ಬೇಟಿ ಬಚಾವ್, ಬೇಟಿ ಪಡವೋ ಮುಂತಾದ ಯೋಜನೆಗಳನ್ನು ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದು ಅಭಿವೃದ್ಧಿ ಮಾಡಿದೆ. ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ರೂ. ಅನುದಾನ ನೀಡಿ ಇದರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ ಎಂದರು.

ದೇಶಕ್ಕೆ ತನ್ನದೇ ಅದ ಪರಂಪರೆ ಇದೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಉದೋಗವನ್ನು ಪಡೆದ 51 ಸಾವಿರ ಅಭ್ಯರ್ಥಿಗಳಿಗೆ ಶುಭವಾಗಲಿ. ಮೈಸೂರು ವಿಭಾಗದಲ್ಲಿ 171 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ವಿಕಸಿತ ಭಾರತಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಅಡಿಪಾಯ ಹಾಕಿದ್ದಾರೆ. ವಿಕಸಿತ ಭಾರತ 2047 ಕ್ಕೇ ಅಭಿವೃದ್ಧಿ ಗುರಿಯನ್ನು ರೂಪಿಸಿದ್ದಾರೆ. ಸರ್ಕಾರದ ಹಲವು ಇಲಾಖೆಗಳು ದೇಶದ ಅಭಿವೃದ್ಧಿ ಹಾಗೂ ಉದ್ಯೋಗ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಭಾರತ ಉತ್ತಮ ಭವಿಷ್ಯವನ್ನು ಹೊಂದಿದ್ದು, ವಿಕಸಿತ ಭಾರತದ ಅಬಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ತಿಳಿಸಿದರು.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಪ್ಪಾವತಿ ಮಾತನಾಡಿ, ಮೈಸೂರಿನ ಆಯುಷ್‌ನಲ್ಲಿ 14 ಅಕಾಡೆಮಿಕ್ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಲಭ್ಯವಿರುವ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು ಎಂದು ಕೋರಿದರು.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ದೇಶದ ಅತಿದೊಡ್ಡ ಪ್ರತಿಷ್ಠಿತ ಸಂಸ್ಥೆ ಆಗಿದ್ದು, ಜನಸಾಮಾನ್ಯರಿಗೆ ಹೊರೆಯಾಗದ ರೀತಿ ಅಗತ್ಯ ಸೇವೆಗಳನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಾ ಅನುದಾನ ಮೂಲಕ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ, ದಕ್ಷಿಣ ಕರ್ನಾಟಕ ವಿಭಾಗದ ಅಂಚೆ ಇಲಾಖೆಯ ನಿರ್ದೇಶಕ ಸಂದೇಶ್ ಮಹದೇವಪ್ಪ, ರೈಲ್ವೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಿಲ್ಪಿ ಅಗರವಾಲ್, ದಕ್ಷಿಣ ಭಾರತದ ಜನರಲ್ ಮ್ಯಾನೇಜರ್ ಚಂದ್ರಶೇರ್ ಕಾಕುಮಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net