

ವಿಜಯಪುರ: ಇಂಡಿ ಶಾಖಾ ಕಾಲುವೆ ನವೀಕರಣಕ್ಕಾಗಿ 2666.70 ಕೋಟಿ ರೂಪಾಯಿ ಅನುದಾನಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ರಾಜ್ಯ ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದರೆ ಕೂಡಲೇ ಡಿಪಿಆರ್ ಸಿದ್ಧಪಡಿಸಿ ಕಳುಹಿಸಲಿ. ತನ್ನ ಪಾಲಿನ ಅನುದಾನ ನೀಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಸವಾಲೆಸೆದರು.
ಇಂಡಿ ಶಾಖಾ ಕಾಲುವೆ ನವೀಕರಣಕ್ಕಾಗಿ ಜಿಲ್ಲೆಯ ಶಾಸಕರಷ್ಟೇ ಏಕೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗಿಂತಲೂ ಮೊದಲೇ (2024 ಸೆ.10) ಕೇಂದ್ರ ಸರ್ಕಾರಕ್ಕೆ ಪತ್ರೆ ಬರೆದು ಒತ್ತಾಯಿಸಿರುವ ದಾಖಲೆಗಳನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ ಅವರು, ಆ ಪತ್ರವನ್ನಾಧರಿಸಿಯೇ ಏಕಮಾತ್ರ ವಿಷಯವನ್ನಾಗಿಸಿಕೊಂಡು ಇಂಡಿ ಶಾಖಾ ಕಾಲುವೆ ನವೀಕರಣ ಕಾಮಗಾರಿಗೆ ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ ಎಂದರು.
ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗಾಗಿ ಅನುದಾನ ನೀಡುವುದಾಗಿ ಸಂಕಲ್ಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎರಡು ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ನೀಡಲೇ ಇಲ್ಲ. ಕಾಲುವೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ಕಾಲುವೆಯ ತುತ್ತ ತುದಿಯವರೆಗೆ ನೀರು ಸರಬರಾಜು ಆಗದ ಹಿನ್ನೆಲೆ ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದೆನು. ಜೊತೆಗೆ ಕಾಂಗ್ರೆಸ್‌ನವರು ಹತ್ತು ವರ್ಷ ಪ್ರಸ್ತಾವನೆ ಪ್ರತಿ ತಮ್ಮ ಬುಡಕ್ಕೆ ಹಾಕಿಕೊಂಡು ಕುಳಿತಿದ್ದು ಕೂಡಲೇ ಆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸುವಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೂ ಪತ್ರ ಬರೆದಿದ್ದೆನು. ಆ ಬಳಿಕವೇ ಕೇಂದ್ರ ಸರ್ಕಾರ ಪ್ರಾಥಮಿಕವಾಗಿ ಭೌತಿಕ ಸ್ಥಿತಿಗತಿಗಳ ವರದಿ ನೀಡಲು ತಿಳಿಸಿತು. ಆ ಕುರಿತು ಏಕೈಕ ವಿಷಯ ತೆಗೆದುಕೊಂಡು ಸಭೆ ನಡೆಸಲಾಯಿತು. ಬಳಿಕ ನಡಾವಳಿ ಪತ್ರ ಕೂಡ ಕಳುಹಿಸಿದರು. ಆ ಸಭೆಯಲ್ಲಿ ತಾವೂ ಭಾಗವಹಿಸಿದ್ದಾಗಿ ಸಂಸದರು ತಿಳಿಸಿದರು.
ಕಾಂಗ್ರೆಸ್ ಕ್ರೆಡಿಟ್‌ಗಾಗಿ ಕಿತ್ತಾಡುತ್ತಿದೆ. ಇಂಡಿ ಶಾಖಾ ಕಾಲುವೆ ನವೀಕರಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಲು ಒಪ್ಪಿಗೆ ನೀಡಿರುವುದರಲ್ಲಿ ತನ್ನ ಪಾತ್ರವಿದ್ದಿದ್ದೇ ಆದರೆ ಹತ್ತು ವರ್ಷ ಪ್ರಸ್ತಾವನೆಯನ್ನು ಬುಡಕ್ಕೆ ಹಾಕಿ ಕುಳಿತಿದ್ದೇಕೆ? ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಅನುದಾನ ನೀಡಿಲ್ಲವೇಕೆ? ಎಂದು ಪ್ರಶ್ನಿಸಿದ ಸಂಸದ ರಮೇಶ ಜಿಗಜಿಣಗಿ ಅವರು, ಇದೀಗ ಕಾಂಗ್ರೆಸ್ ಶಾಸಕರುಗಳು ಕ್ರೆಡಿಟ್‌ಗಾಗಿ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಇನ್ನು ರೇವಣಸಿದ್ಧೇಶ್ವರ ಏತ ನೀರಾವರಿ ಅನುಷ್ಟಾನಗೊಳಿಸಿದ್ದು ಹಿಂದಿನ ಬಿಜೆಪಿ ಸರ್ಕಾರ. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಎರಡನೇ ಬಾರಿಗೆ ಭೂಮಿ ಪೂಜೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲರ ಹೇಳಿಕೆಗೆ ತಿರುಗೇಟು ನೀಡಿದರು.
ನಮ್ಮದೇ ಸರ್ಕಾರ ಅನುದಾನ ನೀಡಿತ್ತು. ಅನುದಾನ ನೀಡದೇ ಭೂಮಿ ಪೂಜೆ ಮಾಡಲು ಹೇಗೆ ಸಾಧ್ಯ? ಖುದ್ಧು ಶಾಸಕ ಯಶವಂತರಾಯಗೌಡರೇ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತೆರೆದ ಬಂಡಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆಗಲೇ ಕಾರ್ಯಾದೇಶದ ಮಾತುಗಳನ್ನಾಡಬೇಕಿತ್ತಲ್ಲವೇ? ಅವರೇನು ಬೊಟ್ಟು ಚೀಪುತ್ತಿದ್ದರೇ? ಗೊತ್ತಿದ್ದೂ ಭಾಗಿಯಾಗಿದ್ದು ಹೇಗೆ? ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾಗಲೇ ಮಾತನಾಡಬಹುದಿತ್ತಲ್ಲವೇ? ಅಂದು ಜೋರು ಜೋರು ಭಾಷಣ ಮಾಡುತ್ತಿದ್ದೀರಲ್ಲ ? ಎಂದ ಸಂಸದ ರಮೇಶ ಜಿಗಜಿಣಗಿ ಅವರ ಹೇಳಿಕೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡ ಕಾಸುಗೌಡ ಬಿರಾದಾರ ಧ್ವನಿ ಗೂಡಿಸಿದರು.
ಮುಖಂಡ ಸಂಜೀವ ಐಹೊಳೆ, ಈರಣ್ಣ ರಾವೂರ, ವಿಜಯ ಜೋಷಿ ಮತ್ತಿತರರಿದ್ದರು.