

ವಿಜಯವಾಣಿ ಸುದ್ದಿಜಾಲ ಉಡುಪಿ
ಜಲ ಜೀವನ ಮಿಷನ್ ಯೋಜನೆಯಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಗಮನ ಸೆಳೆದ ಉಡುಪಿಯ 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ್ ಕೋಟ್ಯಾನ್ ಅವರಿಗೆ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.
ರಾಜ್ಯದಲ್ಲಿ ಘರ್ ಘರ್ ಜಲ್ ಎಂದು ಘೋಷಿಸಿದ ಗ್ರಾಮಗಳ ಪೈಕಿ ಮುಖ್ಯವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಧಿಸುವಲ್ಲಿ ಕೇಶವ್ ಕೋಟ್ಯಾನ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲ್ಯುಎಸ್ಸಿ)ಗಳ ಸದಸ್ಯರ ಪೈಕಿ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷರಾದ ತಮ್ಮನ್ನು ಗಣರಾಜ್ಯೋತ್ಸವದ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾಗಿ ಕೇಂದ್ರದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ದೆಹಲಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಬೀದರ್, ಕಲಬುರ್ಗಿ, ಬಾಗಲಕೋಟೆ, ಕೊಪ್ಪಳ, ಚಿತ್ರದುರ್ಗ ಹಾಗೂ ಉಡುಪಿ ಜಿಲ್ಲೆ ಮಾತ್ರ ಆಯ್ಕೆಯಾಗಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ನಿಯೋಜನೆ ಆದೇಶ ಪತ್ರವನ್ನು ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಅವರು ಕೇಶವ್ ಕೋಟ್ಯಾನ್ ಅವರಿಗೆ ರವಾನಿಸಿದ್ದಾರೆ.