ಕೇಂದ್ರ ಸರ್ಕಾರದ ಅಧಿಕಾರಿಗಳಿಂದ ತಪ್ಪು ವರದಿ ಸಲ್ಲಿಕೆ,ವ್ಯಸನ ಮುಕ್ತಿ ಕೇಂದ್ರಕ್ಕೆ ಅನುದಾನ ತಡೆ

web 4
Published on

ಬಣಕಲ್: ನೂರಾರು ಮದ್ಯವ್ಯಸನಿಗಳ ಬಾಳನ್ನು ಬೆಳಗಿದ ಹೆಸ್ಗಲ್ ಗ್ರಾಪಂ ವ್ಯಾಪ್ತಿಯ ಬಿಳುಗುಳದಲ್ಲಿರುವ ಶಾಂತಿ ವ್ಯಸನ ಮುಕ್ತ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅನುದಾನ ತಡೆಹಿಡಿದಿರುವುದರಿಂದ ಶಾಶ್ವತವಾಗಿ ಬಾಗಿಲು ಮುಚ್ಚುವ ಸ್ಥಿತಿ ನಿರ್ವಣವಾಗಿದೆ.

ಮದ್ಯವ್ಯಸನದಿಂದ ಬದುಕು ನರಕವಾಗಿಸಿಕೊಂಡಿದ್ದ ಮಗ್ಗಲಮಕ್ಕಿ ಗಣೇಶ್ ಬದುಕಿನಲ್ಲಿ ಸಾಕಷ್ಟು ಸಂಕಷ್ಟ ಎದುರಿಸಿದ್ದರು. ನಂತರ ತನ್ನಂತೆಯೇ ಬದುಕನ್ನು ನರಕ ಮಾಡಿಕೊಂಡವರಿಗಾಗಿ ಮದ್ಯಪಾನ ವ್ಯಸನ ಬಿಡಿಸುವ ಸಲುವಾಗಿ ಬಿಳುಗುಳದಲ್ಲಿ 2002ರಲ್ಲಿ ವ್ಯಸನ ಮುಕ್ತಿ ಕೇಂದ್ರ ಸ್ಥಾಪಿಸಿದ್ದರು.

ಈವರೆಗೆ ಮೂರು ಸಾವಿರಕ್ಕೂ ಅಧಿಕ ವ್ಯಸನಿಗಳು ಈ ಕೇಂದ್ರಕ್ಕೆ ಸೇರಿ ವ್ಯಸನ ಮುಕ್ತರಾಗಿದ್ದಾರೆ. ಇಲ್ಲಿ ವ್ಯಸನಿಗಳಿಗೆ ಚಿಕಿತ್ಸೆ, ಆಪ್ತ ಸಮಾಲೋಚನೆ, ಗುಂಪು ಸಲಹೆ, ಆಪ್ತ ಸಲಹೆ ಸೇರಿ ವೈಜ್ಞಾನಿಕವಾಗಿ ಚಿಕಿತ್ಸೆಯನ್ನೂ ನೀಡಲಾಗಿದೆ.

ಆರಂಭದಲ್ಲಿ ದಾನಿಗಳ ನೆರವಿನಿಂದ ನಡೆಯುತ್ತಿದ್ದ ಕೇಂದ್ರಕ್ಕೆ 2011ರಿಂದ 2014ರವರೆಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡಿ ಅನುದಾನ ನೀಡುತ್ತ ಬಂದಿತ್ತು. ಆದರೆ 2019ರಲ್ಲಿ ಕೇಂದ್ರದ ತನಿಖಾ ಅಧಿಕಾರಿಗಳು ಈ ಕೇಂದ್ರಕ್ಕೆ ಆಗಮಿಸಿ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳೆಲ್ಲ ನಿಖರವಾಗಿದ್ದರೂ ಸರಿ ಇಲ್ಲ ಎಂಬ ಕಾರಣ ನೀಡಿ ಅನುದಾನ ತಡೆಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಕೇವಲ ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಆರಂಭಿಸಿದ್ದ ಶಾಂತಿ ವ್ಯಸನಮುಕ್ತಿ ಕೇಂದ್ರವು ಅನುದಾನ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಪದಾಧಿಕಾರಿಗಳು ಕೆಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net