

ಚಿಕ್ಕಮಗಳೂರು: ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಎಪಿಎಂಸಿ ಎದುರು ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ವಿುಕರ ವಿಭಾಗದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಮೈಕೊರೆಯುವ ಚಳಿ ನಡುವೆ ದೆಹಲಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಕನಿಷ್ಠ ಸೌಜನ್ಯಕ್ಕಾದರೂ ಅವರ ಬಳಿ ತೆರಳಿ ಸಮಸ್ಯೆಗೆ ಸ್ಪಂದಿಸದೆ ರೈತರ ಮೇಲೆ ಜಲ ಫಿರಂಗಿ ಹಾರಿಸಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದು ರೈತರಿಗೆ ಮಾಡಿದ ದ್ರೋಹ ಎಂದು ದೂರಿದರು.
ನರೇಂದ್ರ ಮೋದಿ ಅವರು ಮನ್ಕೀ ಬಾತ್ ಬದಿಗೊತ್ತಿ ರೈತರ ಮನ್ಕೀ ಬಾತ್ ಕೇಳಿ ಅವರನ್ನು ಅರ್ಥೈಸಿಕೊಂಡರೆ ಸಾಕು. ರೈತ ವಿರೋಧಿ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಮುನ್ನ ರೈತ ಸಂಘಟನೆಗಳೊಂದಿಗೆ ರ್ಚಚಿಸಿಲ್ಲ ಎಂದು ಆರೋಪಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಜೆ.ಎಚ್.ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದು ರೈತ ವಿರೋಧಿ ಕಾಯ್ದೆ ಜಾರಿಮಾಡುವ ಮೂಲಕ ಅನ್ನದಾತನ ಬೆನ್ನುಮೂಳೆ ಮುರಿಯುತ್ತಿವೆ. ರೈತರು ಕಾಯ್ದೆ ವಿರೋಧಿಸಿದರೂ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮುಂದಾಗಿ ಸರ್ಕಾರ ಕಾಪೋರೇಟ್ ಸಂಸ್ಥೆಗಳ ಪರ ಎಂಬುದನ್ನು ಸಾಬೀತುಪಡಿದೆ ಎಂದು ದೂರಿದರು.