ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ

12-01
ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನುಡಿನಮನ ಪುಸ್ತಕ ಬಿಡುಗಡೆ ಮಾಡಿದರು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿ, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಇದ್ದರು.
Published on

ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಮೀನಮೇಷ -ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ - ಸಾಧಕ-ಬಾಧಕ ಚರ್ಚೆ ಆಗಲಿ

ತೂಬಗೆರೆ: ರಾಜ್ಯದಲ್ಲಿ ಜಾತಿ ಗಣತಿ ನಡೆದು ಸುಮಾರು 12 ವರ್ಷ ಕಳೆದಿವೆ. 10 ವರ್ಷಗಳಿಗೊಮ್ಮೆ ಜಾತಿಗಣತಿ ನಡೆಯಬೇಕು. ಆದರೆ ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ನಡೆಸಲು ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ರಂಗ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಡಿಎಸ್ ಮುಖಂಡ, ಜಿಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ‘ನುಡಿ ನಮನ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಹೊಸದಾಗಿ ಜಾತಿ ಗಣತಿ ನಡೆಸುವುದಾದರೆ ನಡೆಸಲಿ, ಇಲ್ಲದಿದ್ದಲ್ಲಿ ಕೇಂದ್ರ ಸರ್ಕಾರ ಮಾಡುವ ತನಕ ಕಾಯಲಿ. ಕೇಂದ್ರ ಸರ್ಕಾರ ದೇಶದಲ್ಲಿ ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ ಎಂದ ಅವರು, 12 ವರ್ಷಗಳ ಹಿಂದೆ ಕೈಗೊಂಡ ಜಾತಿಗಣತಿಯನ್ನು ಈಗ ಅನುಷ್ಠಾನಕ್ಕೆ ತರುವುದು ಎಷ್ಟರ ಮಟ್ಟಿಗೆ ಸರಿ? ಅದರ ಸಾಧಕ-ಭಾದಕಗಳ ಚರ್ಚಿಸುವ ಅಗತ್ಯ ಇದೆ ಎಂದರು.

ಇನ್ನು ಸಿ.ಟಿ. ರವಿಗೆ ಪ್ರಾಣ ಬೆದರಿಕೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ, ಪ್ರಾಣ ಬೆದರಿಕೆ ಪತ್ರ ಅದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು,

ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ಅಪ್ಪಯ್ಯಣ್ಣ ಅವರ ಕೊಡುಗೆ ಅಪಾರ. ದೊಡ್ಡಬಳ್ಳಾಪುರದಲ್ಲಿ ರಾಜಕೀಯ ಮಾಡುವುದು ಸುಲಭದ ಮಾತಲ್ಲ. ಇಂತಹ ಕ್ಷೇತ್ರದಲ್ಲಿ ಜೆಡಿಎಸ್ ಕಟ್ಟಿ ಬೆಳೆಸಿದ ಕೀರ್ತಿ ಅಪ್ಪಯ್ಯಣ್ಣ ಅವರಿಗೆ ಸಲ್ಲುತ್ತದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜತೆಯಲ್ಲಿ ಅವರು ಉತ್ತಮ ಸಂಬಂಧ ಹೊಂದಿದ್ದರು. ಅವರ ಪಕ್ಷ ನಿಷ್ಠೆಯಿಂದ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ತಳ ಮಟ್ಟದಿಂದ ಸಂಘಟಿತವಾಗಲು ಸಾಧ್ಯವಾಯಿತು. ಅಪ್ಪಯ್ಯಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳ ಮುನಿಶ್ಯಾಮಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷಿ ್ಮೀಪತಯ್ಯ, ಮಾಜಿ ಎಂಎಲ್ಸಿ ರಮೇಶ್ ಗೌಡ, ತೆಂಗು-ನಾರು ಮಂಡಳಿ ಅಧ್ಯಕ್ಷ ಗಂಟಿಗಾನಹಳ್ಳಿ ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net