ಬಂಡವಾಳಶಾಹಿಗಳಿಗೆ ಕೇಂದ್ರ ಸರ್ಕಾರದಿಂದ ಅನುಕೂಲ

ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿನ ಕಾಮ್ರೇಡ್ ಶ್ರೀಧರ್ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಅಧಿವೇಶನದಲ್ಲಿ ಎಸ್.ವೈ.ಗುರುಶಾಂತ್ ಮಾತನಾಡಿದರು. ಎಚ್.ಬಿ.ರಮೇಶ್, ಎ.ಮಹದೇವ, ಎನ್.ಡಿ.ಕುಟ್ಟಪ್ಪ, ಎ.ಸಿ.ಸಾಬು, ಪದ್ಮಿನಿ, ಕೆ.ಎಸ್. ರಮೇಶ್ ಇದ್ದರು.
ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿನ ಕಾಮ್ರೇಡ್ ಶ್ರೀಧರ್ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಅಧಿವೇಶನದಲ್ಲಿ ಎಸ್.ವೈ.ಗುರುಶಾಂತ್ ಮಾತನಾಡಿದರು. ಎಚ್.ಬಿ.ರಮೇಶ್, ಎ.ಮಹದೇವ, ಎನ್.ಡಿ.ಕುಟ್ಟಪ್ಪ, ಎ.ಸಿ.ಸಾಬು, ಪದ್ಮಿನಿ, ಕೆ.ಎಸ್. ರಮೇಶ್ ಇದ್ದರು.
Published on

ವಿರಾಜಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಡವರ ಪರ ಕಾಳಜಿ ಇಲ್ಲವಾಗಿದ್ದು, ಅದಾನಿ ಮತ್ತು ಅಂಬಾನಿ ಕುಟುಂಬದ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುದಾನ ಬಿಡುಗಡೆಗೊಳಿಸುವುದೇ ಅಭಿವೃದ್ಧಿ ಎಂದು ಮೋದಿ ಸರ್ಕಾರ ಭಾವಿಸಿದೆ ಎಂದು ಸಿಪಿಐ (ಎಂ) ನ ರಾಜ್ಯ ಸಮಿತಿ ಸದಸ್ಯ ಎಸ್.ವೈ.ಗುರುಶಾಂತ್ ವಾಗ್ದಾಳಿ ನಡೆಸಿದರು.

ಭಾರತ್ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ವತಿಯಿಂದ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿನ ಕಾಮ್ರೇಡ್ ಶ್ರೀಧರ್ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ್ದ 9ನೇ ಕೊಡಗು ಜಿಲ್ಲಾ ಸಮ್ಮೇಳನ ಮತ್ತು ಬಹಿರಂಗ ಅಧಿವೇಶನದಲ್ಲಿ ಮಾತನಾಡಿದರು.

ನಮ್ಮ ಪಕ್ಷ ಬಂಡವಾಳ ಶಾಹಿಗಳು, ಕಾರ್ಮಿಕರ ಧೋರಣೆ ವಿರುದ್ಧ ಹೋರಾಟ ಮಾಡುವ ಮೂಲಕ ಹಲವಾರು ಕಾರ್ಮಿಕರ ಸಮಸ್ಯೆಗಳನ್ನು ನೀಗಿಸಿದೆ. ಈ ಮೊದಲು ದೇಶದ ಮೂರು ರಾಜ್ಯಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿತ್ತು. ಕೆಲವು ಕುತಂತ್ರಗಳಿಂದ ಒಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ಸರ್ಕಾರ 10 ವರ್ಷಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ಕೈಗಾರಿಕೋದ್ಯೋಮಿಗಳ ಪರ ನಿಂತು ಬಂಡವಾಳಶಾಹಿಗಳಿಗೆ ಮಾತ್ರ ಸೀಮಿತವಾದಂತೆ ಅನುದಾನ ಬಿಡುಗಡೆಗೊಳಿಸುತ್ತಿದೆ ಎಂದು ಕಿಡಿಕಾರಿದರು.

ರೈತರ ಪರವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಕೊಡಗಿನಲ್ಲಿರುವ ಆನೆ ಮಾನವ ಸಂಘರ್ಷ, ರೈತರ ಸಮಸ್ಯೆ, ಭೂಮಿ ಸಮಸ್ಯೆಗಳ ವಿರುದ್ಧ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಯಾದವ್ ಶೆಟ್ಟಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ 2 ಕೊಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ನೈಜ ಸಮಸ್ಯೆಗಳನ್ನು ಮರೆಮಾಚಿ ಬೃಹತ್ ಬಂಡವಾಳಶಾಹಿ ಪರ ಕೇಂದ್ರ ಸರ್ಕಾರ ನಿಂತಿದೆ. ಇದಕ್ಕೆ ಹೋರಾಟದ ಮೂಲಕ ಉತ್ತರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ತೆಲುಗರ ಬೀದಿ ಮಾರಿಯಮ್ಮ ದೇವಾಲಯದಿಂದ ಮಹಿಳಾ ಸಮಾಜದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕಾರ್ಮಿಕ ಗೀತೆ ಹಾಡಲಾಯಿತು.

ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲ ಐ.ಆರ್. ಪ್ರಮೋದ್ ಮಾತನಾಡಿ, ನಮ್ಮ ಪಕ್ಷ ಕಾರ್ಮಿಕರು ಮತ್ತು ರೈತರ ಏಳಿಗೆ ಬಯಸಲಿದೆ. ಆನೆ-ಮಾನವ ಸಂಘರ್ಷಕ್ಕೆ ಕೊಡಗಿನಲ್ಲಿ ಅನೇಕ ಕಾರ್ಮಿರು ಜೀವ ಕಳೆದುಕೊಂಡಿದ್ದಾರೆ. ಜತೆಗೆ ಅನೇಕರು ಅಂಗವಿಕಲರಾಗಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್, ಜಿಲ್ಲಾ ಸಮಿತಿ ಸದಸ್ಯರಾದ ಎ.ಮಹದೇವ. ಎನ್.ಡಿ. ಕುಟ್ಟಪ್ಪ, ಎ.ಸಿ.ಸಾಬು. ಪದ್ಮಿನಿ ಶ್ರೀಧರ್, ಕೆ.ಎಸ್.ರಮೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net