ಸಹಕಾರ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೆರವು

14sunti01
Published on

ಸುಂಟಿಕೊಪ್ಪ: ವಿಕಸಿತ ಭಾರತ ಮಹತ್ವದ ಪಟ್ಟದತ್ತ ಸಾಗುತ್ತಿದ್ದು, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬಿಸುವ ಮೂಲಕ ಅನ್ನದಾತ ರೈತರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಹೇಳಿದರು.

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನರೇಂದ್ರ ಮೋದಿ ಭವನದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ರಾಜ್ಯ ಸಹಕಾರ ಮಹಾ ಮಂಡಳಿ ಬೆಂಗಳೂರು ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಚಳವಳಿಯ ಬಲಪಡಿಸುವ ವಿಚಾರ ಸಂಕಿರಣದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ವಿಕಸಿತ ಭಾರತದ ವೇಗಕ್ಕೆ ತಕ್ಕಂತೆ ಅರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರವನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಭಾರತ ಅರ್ಥಿಕವಾಗಿ ಪ್ರಪಂಚದ 4ನೇ ದೇಶವಾಗಿದ್ದು, 2028ರಲ್ಲಿ 3ನೇ ಸ್ಥಾನ ಬರಲಿದೆ. ವಿವಿಧೋದ್ದೇಶ ಸಹಕಾರ ಸಂಘವನ್ನು ರಚಿಸಲು ಕೇಂದ್ರ ಸರ್ಕಾರ ಅನುದಾನ ನೀಡುತ್ತಿರುವುದು ಆಧುನಿಕ ಕೃಷಿ ಪದ್ಧತಿಗೆ ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.

ಸಹಕಾರ ಚಳವಳಿ ಬಲಪಡಿಸುವ ಬಗ್ಗೆ ಕೊಡಗು ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ರೇಣುಕಾ ಮಾತನಾಡಿ, ಪ್ರಪಂಚದ 195 ರಾಷ್ಟ್ರಗಳಲ್ಲಿ 130 ರಾಷ್ಟ್ರದಲ್ಲಿ ಸಹಕಾರ ಚಳವಳಿ ನಡೆಸಲಾಗುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಆಹಾರ ಭದ್ರತೆಗೆ ಒತ್ತು, ಹಸಿವುಮುಕ್ತ ಭಾರತ ದೇಶ ಪ್ರಧಾನಿಯ ಆಶಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲರಂಡ ಮಣಿ ಉತ್ತಪ್ಪ ಮಾತನಾಡಿ, ರೈತರು ಅಭಿವೃದ್ಧಿಯಾದರೆ ದೇಶ ಎಲ್ಲ ರಂಗದಲ್ಲೂ ಸುಧಾರಣೆಯಾಗಲಿದೆ. ಸಹಕಾರಿಗಳ ಬೆಂಬಲದಿಂದ ಸಂಘ ಬಲಿಷ್ಠವಾಗಿ ಬೆಳೆದಿದೆ. ಒಂದಿಬ್ಬರು ಸದಸ್ಯರ ದುರುದ್ದೇಶದಿಂದ ಸಂಘದ ಬಗ್ಗೆ ಇಲಾಖೆಗೆ ದೂರು ನೀಡಿರುವುದು ಖಂಡನೀಯ ಎಂದು ಹೇಳಿದರು.

ಚೆಟ್ಟಳ್ಳಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷರಾದ ಬಿದ್ದಂಡ ಅಚ್ಚಯ್ಯ, ಕೆ.ಎಂ.ಅಪ್ಪಣ್ಣ, ಮಾಜಿ ಉಪಾಧ್ಯಕ್ಷರಾದ ಕೊಜಾಲು ಪೂವಯ್ಯ, ಎಚ್.ಎಸ್.ತಿಮ್ಮಪ್ಪಯ್ಯ, ಮಾಜಿ ನಿರ್ದೇಶಕರಾದ ಟಿ.ಎಸ್.ಧನಂಜಯ, ಅಡಿಕೇರ ಜಯ, ಸೀತಮ್ಮ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ರಮೇಶ್ ಚಂಗಪ್ಪ, ಜನತಾ ಬಜಾರ್ ಅಧ್ಯಕ್ಷ ರವಿ ಬಸಪ್ಪ, ಗುಡ್ಡೆಹೊಸೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಡಿ.ಮಲ್ಲೇಶ್, ಸಹಕಾರಿ ಯೂನಿಯನ್ ಉಪಾಧ್ಯಕ್ಷ ಮನುರಾಮಚಂದ್ರ, ಸಹಕಾರಿ ಇಲಾಖೆ ಉಪನಿಬಂಧಕಿ ಶೈಲಾಜಾ, ಮಾಜಿ ಅಧ್ಯಕ್ಷ ಬಿದ್ದಂಡ ಅಚ್ಚಯ್ಯ, ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಚೆಟ್ಟಳ್ಳಿ ವಿಎಸ್‌ಎಸ್‌ಎನ್ ಸಿಇಒ ನಂದಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net