ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ

VMS 1-5
Published on

ವಿಜಯಪುರ: ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಖಂಡಿಸಿ ಮರ್ಚಂಟ್ಸ್ ಅಸೋಸಿಯೇಷನ್, ರಾಜ್ಯ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ಮುಂಭಾಗದಲ್ಲಿ ಸೇರಿದ ಪ್ರತಿಭಟನಾಕಾರರನ್ನುದ್ದೇಶಿಸಿ ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಈ ಕಾಯ್ದೆಯಡಿ ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಖರೀದಿಸುವುದರಿಂದ ಕೃಷಿ ಮಾರುಕಟ್ಟೆಯಲ್ಲಿ ಸಿಗುವ ಸ್ಪರ್ಧಾತ್ಮಕ ಬೆಲೆ ರೈತರಿಗೆ ಸಿಗಲಾರದೇ ಅವರು ಸಂಕಷ್ಟಕ್ಕೆ ಒಳಗಾಗುತ್ತಾರೆ. ನೇರ ಖರೀದಿಯಿಂದ ರಾಜ್ಯ ಸರ್ಕಾರಕ್ಕೆ ಬರುವ ಕೋಟ್ಯಂತರ ಸೆಸ್ ಹಾಗೂ ಜಿಎಸ್‌ಟಿ ದೊರಕದೇ ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟಾಗುವುದು. ರೈತರಿಂದ ನೇರವಾಗಿ ಬೆಳೆ ಖರೀದಿಸುವುದರಿಂದ ಎಪಿಎಂಸಿಯನ್ನು ಅವಲಂಬಿಸಿದ ಸಾವಿರಾರು ಜನ ಬೀದಿಪಾಲಾಗುತ್ತಾರೆ ಎಂದರು.
ಎಪಿಎಂಸಿ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಎಪಿಎಂಸಿ ಕಾಯ್ದೆಗೆ ಈಗಾಗಲೇ ತಿದ್ದುಪಡಿ ತರಲು ಉದ್ದೇಶಿಸಿದ್ದರಿಂದ ರೈತರು, ವ್ಯಾಪಾರಸ್ಥರ ಜಂಟಿ ಹೋರಾಟದಿಂದ ಕಾಯ್ದೆಯನ್ನು ವಾಪಸ್ ಪಡೆಯಲಾಗಿತ್ತು. ಈಗಲೂ ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ದುಡಿಯುವ ವರ್ಗಕ್ಕೆ ಕಂಟಕವಾಗಿರುವ ಈ ಕಾಯ್ದೆ ತಿದ್ದುಪಡಿ ಪ್ರಸ್ತಾವ ಕೈಬಿಡಬೇಕೆಂದು ಸೋಮವಾರ ಎಪಿಎಂಸಿ ವ್ಯಾಪಾರ ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ ಎಂದರು.
ಅರವಿಂದ ಕುಲಕರ್ಣಿ, ಅಣ್ಣಾರಾಯ ಈಳಗೇರ, ಸದಾಶಿವ ಭರಟಗಿ, ಸಿದ್ರಾಮ ಅಂಗಡಗೇರಿ, ಭೀಮರಾಯ ಪೂಜಾರಿ, ಬಸನಗೌಡ ಧರ್ಮಗೊಂಡ, ಬಾಳು ಜೇವೂರ, ಚಂದ್ರಾಮ ತೆಗ್ಗಿ, ಶೇಖಪ್ಪ ಕರಾಬಿ, ರಾಮಣ್ಣ ಶಿರಗೊಳ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net