

ಶಿವಮೊಗ್ಗ: ಕೇಂದ್ರ ಸರ್ಕಾರ ಅದಾನಿ ಸಮೂಹದಲ್ಲಿ ಎಲ್‌ಐಸಿ ಮತ್ತು ಎಸ್‌ಬಿಐ ಮೂಲಕ ಅಪಾಯಕಾರಿ ವಹಿವಾಟು ನಡೆಸಿರುವುದನ್ನು ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿ ಫೆ. 6ರಂದು ಜಿಲ್ಲಾಮಟ್ಟದಲ್ಲಿ ಫೆ.6ರಂದು ಎಲ್‌ಐಸಿ ಮತ್ತು ಎಸ್‌ಬಿಐ ಕಚೇರಿಗಳ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಎನ್.ರಮೇಶ್ ತಿಳಿಸಿದರು.
ಬೆಳಗ್ಗೆ 10.30ಕ್ಕೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬಿ.ಎಚ್.ರಸ್ತೆಯಲ್ಲಿರುವ ಎಸ್‌ಬಿಐ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಬೂತ್‌ಮಟ್ಟದಿಂದ ಎಲ್ಲ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ತನ್ನ ಆಪ್ತರು ಮತ್ತು ಆಯ್ದ ಬಿಲಿಯನೇರ್‌ಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದ್ದು ಜನಸಾಮಾನ್ಯರು ಕಷ್ಟಪಟ್ಟು ಉಳಿತಾಯ ಮಾಡಿ ಹೂಡಿಕೆ ಮಾಡಿರುವ ಹಣದ ಬಗ್ಗೆ ಚಿಂತೆ ಮಾಡುವಂತಾಗಿದೆ. ಕೇಂದ್ರದ ನೀತಿಗಳಿಂದ ಎಲ್‌ಐಸಿಯ 29 ಕೋಟಿ ಪಾಲಿಸಿದಾರರು ಮತ್ತು ಎಸ್‌ಬಿಐನ 45 ಕೋಟಿ ಖಾತೆದಾರರು ಆತಂಕದಲ್ಲಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಆದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಬಲವಂತ ಮಾಡಿದ ಪರಿಣಾಮ ಎಲ್‌ಐಸಿಯ 39 ಕೋಟಿ ಪಾಲಿಸಿದಾರರು ಬರೋಬ್ಬರಿ 33,060 ಕೋಟಿ ರೂ. ಕಳೆದುಕೊಂಡಿದ್ದಾರೆ. ಎಸ್‌ಬಿಐ ಕೂಡ ಅದಾನಿ ಕಂಪನಿಗೆ ಭಾರಿ ಮೊತ್ತದ ಸಾಲ ನೀಡಿದ್ದು ಭಾರತೀಯ ಬ್ಯಾಂಕ್‌ಗಳಿಗೆ 80 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ದೂರಿದರು.
ಬಡವರು ಮತ್ತು ಜನಸಾಮಾನ್ಯರ ಪರ ಕಾಂಗ್ರೆಸ್ ನಿಂತಿದ್ದು, ಎಲ್‌ಐಸಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವ ವಿಷಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿ ಹೋರಾಟಕ್ಕೆ ಸಜ್ಜಾಗಿದೆ. ಹಾಗಾಗಿ ಫೆ.6ರಂದು ರಾಷ್ಟ್ರಮಟ್ಟದಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಎಸ್.ಕೆ.ಮರಿಯಪ್ಪ, ರೇಖಾ ರಂಗನಾಥ್, ಪ್ರವೀಣ್‌ಕುಮಾರ್, ಎಚ್.ಪಿ.ಗಿರೀಶ್, ಸಿ.ಎಸ್.ಚಂದ್ರಭೂಪಾಲ್, ಶಿವಾನಂದ್, ಮಧು, ಲೋಕೇಶ್, ನಾಗರಾಜ್, ದೀಪಕ್‌ಸಿಂಗ್ ಇತರರಿದ್ದರು.