

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ 11 ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಭಾರತದ ಸಮಗ್ರ ಚಿತ್ರಣವನ್ನೇ ಬದಲಾಯಿಸಿದ್ದಾರೆ ಎಂದು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಹೇಳಿದರು.
ನಗರದ ವಿಠ್ಠಲ ಸಮುದಾಯ ಭವನದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತ ಇಂದು ಒಂದು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. 2014ರ ಭಾರತ ಮತ್ತು 2025ರ ಭಾರತವನ್ನು ಹೋಲಿಸಿ ನೋಡಿದಾಗ ನಮ್ಮ ದೇಶ ಎಷ್ಟರಮಟ್ಟಿಗೆ ಬೆಳವಣಿಗೆ ಸಾಧಿಸಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ ಎಂದರು.
ದೇಶದ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುತ್ತಾ ಭಾರತ ಇಂದು ಒಂದು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಇಂದು ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿದೆ. ನಾವಿಂದು ಹಲವಾರು ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಬಾಹ್ಯಾಕಾಶ ಅನ್ವೇಷಣೆ ನಡೆಸುತ್ತಿದ್ದೇವೆ. ಜಾಗತಿಕ ಗುಣಮಟ್ಟದ ರಸ್ತೆಗಳು, ರೈಲ್ವೆ, ಶಾಲೆ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿದ್ದೇವೆ. 2014ರ ಭಾರತ ಮತ್ತು 2025ರ ಭಾರತವನ್ನು ಹೋಲಿಸಿ ನೋಡಿದಾಗ ನಮ್ಮ ದೇಶ ಎಷ್ಟರಮಟ್ಟಿಗೆ ಬೆಳವಣಿಗೆ ಸಾಧಿಸಿದೆ ಎಂಬುದು ಅರಿವಾಗುತ್ತದೆ ಎಂದುದನ್ನು ವಿವರಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಮೇಕ್ ಇನ್ ಇಂಡಿಯಾ’ದಂತಹ ಸ್ಮಾರ್ಟ್ ಯೋಜನೆಗಳು ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ನಡೆಸುವಂತೆ ಮಾಡಿದ್ದರಿಂದ ಭಾರತ ಇಂತಹ ಪ್ರಗತಿ ಸಾಧಿಸಲು ಸಾಧ್ಯವಾಯಿತು. 2000ದಿಂದ 2024ರ ನಡುವೆ ಭಾರತಕ್ಕೆ 1 ಟ್ರಿಲಿಯನ್ ಡಾಲರ್ ವಿದೇಶಿ ಹೂಡಿಕೆ ಲಭಿಸಿದ್ದು, ಇದರಲ್ಲಿ ಶೇ.69ರಷ್ಟು ಕಳೆದ 10 ವರ್ಷದ ಅವಧಿಯಲ್ಲಿ ಬಂದಿದೆ. ಇನ್ನು ಡಿಜಿಟಲ್ ಇಂಡಿಯಾ ಕಾರ್ಯಕ್ರಮವಂತೂ ಭಾರತವನ್ನು ಡಿಜಿಟಲ್ ಪಾವತಿಯಲ್ಲಿ ಜಾಗತಿಕ ನಾಯಕನನ್ನಾಗಿಸಿದೆ. ನಮ್ಮ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಇಂದು ಒಟ್ಟು ಡಿಜಿಟಲ್ ವ್ಯವಹಾರಗಳ ಶೇ.83ರಷ್ಟು ಪಾಲನ್ನು ನಿಯಂತ್ರಿಸುತ್ತಿದ್ದು, ಇತರ ದೇಶಗಳೂ ಈಗ ನಮ್ಮ ವ್ಯವಸ್ಥೆಯನ್ನು ನಕಲು ಮಾಡುತ್ತಿವೆ ಎಂದು ವಿವರಿಸಿದರು.
2014ರಲ್ಲಿ ಭಾರತದ ರಕ್ಷಣಾ ರಫ್ತು ಬಹಳ ಸಣ್ಣದಾಗಿದ್ದು, 2004ರಿಂದ 2014ರಲ್ಲಿ ಕೇವಲ 4,312 ಕೋಟಿ ರೂಪಾಯಿಗಳಾಗಿತ್ತು. ಆದರೆ, 2024-25ರ ವೇಳೆಗೆ, ನಮ್ಮ ರಕ್ಷಣಾ ರಫ್ತು 23,622 ಕೋಟಿ ರೂಪಾಯಿಗಳಿಗೆ (2.76 ಬಿಲಿಯನ್ ಡಾಲರ್ಸ್‌ಗೆ) ಏರಿಕೆ ಕಂಡಿದೆ. ಭಾರತ ಪ್ರತಿ ವರ್ಷವೂ ಶೇ.12.04ರಷ್ಟು ಪ್ರಗತಿ ಸಾಧಿಸುತ್ತಿದ್ದು, 90ಕ್ಕೂ ಹೆಚ್ಚು ದೇಶಗಳಿಗೆ ಆಯುಧಗಳನ್ನು ಮಾರಾಟ ಮಾಡುತ್ತಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಜಾಗತಿಕ ಶಾಂತಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತಾ ವಿಶ್ವಸಂಸ್ಥೆಯ ಶಾಂತಿಪಾಲನೆಯಲ್ಲಿ ದೇಶವು ಪ್ರಮುಖ ಶಕ್ತಿಯಾಗಿ ನಿಂತಿದೆ. ವಿಶ್ವಾದ್ಯಂತ 50 ಕಾರ್ಯಾಚರಣೆಯಲ್ಲಿ 2.9 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ. ಸಾಂಕ್ರಾಮಿಕ ಸಮಯದಲ್ಲಿ ಭಾರತವು ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ ಎರಡು ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಒದಗಿಸಿತು. ಶಾಂತಿಯ ಮುಂಚೂಣಿಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯನ್ನು ಬೆಂಬಲಿಸಿತು ಎಂದರು.
ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಸದಾನಂದ್ ಮಾತನಾಡಿ, ದೇಶದಲ್ಲಿ ಏನು ಬದಲಾಗಿದೆ ಎಂಬುವವರಿಗೆ ಈ ಉಪಕ್ರಮಗಳೇ ಉತ್ತರ ನೀಡುತ್ತವೆ. ಬೇಟಿ ಬಚಾವೋ ಬೇಟಿ ಪಢಾವೋ ಮುಂತಾದ ಉಪಕ್ರಮಗಳು ಹೆಣ್ಣುಮಕ್ಕಳಿಗೆ ನೆರವಾಗಿವೆ. ಜನಧನ್ ಯೋಜನೆ, ಡಿಜಿಟಲ್ ಆರ್ಥಿಕ ವಹಿವಾಟು, ಮನೆಗಳ ನಿರ್ಮಾಣ, ಕುಡಿಯುವ ನೀರು ಯೋಜನೆ, ಡಿಜಿಟಲ್ ಇಂಡಿಯಾ, ಉದ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಹತ್ತು ವರ್ಷಗಳಲ್ಲಿ ದೇಶದಲ್ಲಿ ಆದ ಬದಲಾವಣೆಗಳ ಕುರಿತು ಮಾಹಿತಿ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಫಣೀಶ್, ಎಚ್.ಆರ್.ಅಶೋಕ್‌ಕುಮಾರ್, ವಿವೇಕ್, ಕೆಂಪಬೋರಯ್ಯ, ಸಿ.ಟಿ.ಮಂಜುನಾಥ್, ಚಂದ್ರು, ಪ್ರಸನ್ನಕುಮಾರ್, ಗೊರವಾಲೆ ಶಿವಣ್ಣ , ಪುಟ್ಟಸ್ವಾಮಿ, ನರಸಿಂಹಚಾರ್, ಸುಜಾತಾ ಕೃಷ್ಣ ಇತರರಿದ್ದರು.