ಕೇಂದ್ರದ ಮಲತಾಯಿ ಧೋರಣೆಗೆ ಖಂಡನೆ

laxman dasti
Published on

ಕಲಬುರಗಿ: ಹಿಂದುಳಿದ ಮತ್ತು ೩೭೧ನೇ (ಜೆ) ಕಲಂ ವಿಶೇಷ ಸ್ಥಾನಮಾನ ಪಡೆದ ಕಲ್ಯಾಣ ಕರ್ನಾಟಕದ ಪ್ರಗತಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದ್ದು, ಇದೇ ರೀತಿ ಮುಂದುವರಿದರೆ ಈ ಭಾಗದ ಏಳು ಜಿಲ್ಲೆಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಗೌರವ ಅಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷö್ಮಣ ದಸ್ತಿ ಎಚ್ಚರಿಕೆ ನೀಡಿದ್ದಾರೆ.

ರೈಲ್ವೆ ವಿಭಾಗ, ಏಮ್ಸ್ ಸ್ಥಾಪನೆ, ಹೆದ್ದಾರಿ, ವಿಮಾನಯಾನ ಅಭಿವೃದ್ಧಿ, ೨ನೇ ರಿಂಗ್ ರಸ್ತೆ ನಿರ್ಮಾಣ, ಮೇಘಾ ಟೆಕ್ಸ್ಟೈಲ್ ಪಾರ್ಕ್ ಸೇರಿ ಹಲವು ಯೋಜನೆ ನೆನೆಗುದಿಗೆ ಬಿದಿದ್ದು, ೧೧ ವರ್ಷದಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಫಜಲ್ ಅಲಿ ವರದಿ, ಸರೀನ್ ಕಮೀಟಿ ವರದಿ, ಬಚಾವತ್ ವರದಿ, ಬ್ರಿಜೇಷ್ ವರದಿ, ನಂಜುAಡಪ್ಪ ವರದಿ ಸೇರಿ ಸರ್ಕಾರದ ಅಧಿಕೃತ ವರದಿಗಳ ಶಿಫಾರಸುಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಈ ಭಾಗದ ಜನರಿಗೆ ಕೇಂದ್ರ ಸರ್ಕಾರದ ಮೇಲೆ ಭರವಸೆ ಇಲ್ಲದಂತಾಗಿದೆ. ದೇಶದ ವಿವಿಧೆಡೆ ಅಭಿವೃದ್ಧಿ ಮಾಡಲು ಇಲ್ಲದ ಮಾನದಂಡ ನಮ್ಮ ಭಾಗಕ್ಕೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರೈಲ್ವೆ ವಿಭಾಗೀಯ ಕಚೇರಿ, ಏಮ್ಸ್ ಸ್ಥಾಪನೆಗೆ ಎಲ್ಲ ಅರ್ಹತೆ ಇದ್ದರೂ ನಿರ್ಲಕ್ಷಿಸಲಾಗುತ್ತಿದೆ. ಕೇಂದ್ರದ ಬಜೆಟ್‌ನಲ್ಲಿ ಕಕ ಭಾಗಕ್ಕೆ ಘೋಷಣೆಯಾದ ಯೋಜನೆಗಳು ಅನುಷ್ಠಾನವಾಗಬೇಕು. ಬಹುದಿನದ ಬೇಡಿಕೆಯಾದ ರೈಲ್ವೆ ವಿಭಾಗ, ಏಮ್ಸ್ ಸ್ಥಾಪಿಸಬೇಕು. ಪ್ರಗತಿಗೆ ವಿಶೇಷ ಪ್ಯಾಕೇಜ್ ಅನುದಾನ ನೀಡಬೇಕು, ಕೇಂದ್ರದಿAದ ಘೋಷಣೆಯಾದ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಹೊಸ ಯೋಜನೆಗಳ ಸ್ಥಾಪನೆಗೆ ಸಿದ್ಧರಾಮಯ್ಯನವರ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ನಮ್ಮ ಪ್ರದೇಶದ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಏಳು ಜಿಲ್ಲೆಗಳಲ್ಲಿ ಸಮಿತಿ ಹಿಂದೆ ನಿರ್ಣಯಿಸಿದಂತೆ, ವಿಚಾರ ಸಂಕಿರಣ ಹಮ್ಮಿಕೊಂಡು ಜಾಗೃತಿ ಅಭಿಯಾನ ನಡೆಸಿ, ಉಗ್ರ ಹೋರಾಟಕ್ಕೆ ರೂಪಿಸುವ ಕುರಿತು ಆಯಾ ಕ್ಷೇತ್ರದ ಗಣ್ಯರ, ಸಂಘ ಸಂಸ್ಥೆ ಸಂಘಟನೆಗಳ ಪ್ರಮುಖರ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net