

ಮಂಗಳೂರು: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಭಾನುವಾರ ಮಂಗಳೂರಿಗೆ ಭೇಟಿ ನೀಡಿದರು.
ಬೈಕಂಪಾಡಿಯ ಐಸ್ ಪ್ಲ್ಯಾಂಟ್‌ಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು. ಬಳಿಕ ಕುಳಾಯಿ ಮಾಸ್ಟರ್ ಸ್ಟೋರೇಜ್ ಘಟಕಕ್ಕೆ ಭೇಟಿ ನೀಡಿ, ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆಯಡಿ ಫಲಾನುಭವಿಗಳಿಗೆ ಶೀತಲೀಕರಣ ವಾಹನ ವಿತರಿಸಿದರು.
ಬಂಗ್ರಕೂಳೂರಿನ ಫಲ್ಗುಣಿ ನದಿ ತೀರಕ್ಕೆ ಭೇಟಿ ನೀಡಿ, ಅಲ್ಲಿ ನಿರ್ಮಿಸಲಾಗಿರುವ ಪಂಜರ ಕೃಷಿ ಘಟಕವನ್ನು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೊಸದಾಗಿ ಕೃಷಿ ಸಚಿವಾಲಯ ಆರಂಭಿಸಿದ ಬಳಿಕ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕರೊನಾ ಭೀತಿಯ ನಡುವೆಯೂ ಮೀನುಗಾರಿಕಾ ಕ್ಷೇತ್ರ ಯಶಸ್ವಿಯಾಗಿ ಮುನ್ನಡೆದಿದೆ ಎಂದರು.
ಮೀನುಗಾರಿಕಾ ಸಚಿವ ಎಸ್.ಅಂಗಾರ, ಶಾಸಕ ವೈ.ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.