ಭಾರತಕ್ಕೆ, ಪ್ರಧಾನಿ ಮೋದಿಗೆ ಶ್ರೀಕೃಷ್ಣ ಅನುಗ್ರಹಿಸಲಿ...

Nirmala Lead
Published on

ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಾರ್ಥನೆ

ಉಡುಪಿಯಲ್ಲಿ ಕಾಷ್ಠ ಯಾಳಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾನಿಂದು ಶ್ರೀಕೃಷ್ಣನ ದರ್ಶನದಿಂದ ಭಾವುಕಳಾಗಿದ್ದೇನೆ. ಶ್ರೀಕೃಷ್ಣನನ್ನು ಅತ್ಯಂತ ಸಮೀಪದಿಂದ ಸಂದರ್ಶಿಸಿದ ಜೀವನದ ಅತ್ಯಂತ ಪುಣ್ಯದ ಕಾಲವಿದು. ನನ್ನ ಪ್ರಾರ್ಥನೆ ಒಂದೇ. ಶ್ರೀಕೃಷ್ಣನು ಭಾರತಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವದಿಸಿಲಿ. ಯುವ ಜನತೆಗಾಗಿ ಭಾರತ ಸಮೃದ್ಧವಾಗಲಿ. ರಕ್ಷಾ ಬಂಧನದ ಈ ವಿಶೇಷ ದಿನದಂದು ಯುವ ಸಮುದಾಯ ದೇಶ ರಕ್ಷಣೆಯ ಪಣ ತೊಡಲಿ. ಭಾರತದ ಮುಂದಿರುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸ್ಥೈರ್ಯ-ಸಾಮರ್ಥ್ಯವನ್ನು ಶ್ರೀಕೃಷ್ಣ, ಎಲ್ಲ ಗುರುಗಳು ಹಾಗೂ ಭಾರತ ಮಾತೆ ಆಶೀರ್ವದಿಸಲಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

Yaali
ಉಡುಪಿ ಶ್ರೀಕೃಷ್ಣ ಮಠದ ಕನಕ ಮಂಟಪದ ಬಳಿ ಪರ್ಯಾಯ ಪುತ್ತಿಗೆ ಮಠದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಷ್ಠ ಯಾಳಿ ಹಾಗೂ ಗೀತಾಮಂದಿರದಲ್ಲಿ ಪುತ್ತಿಗೆ ವಿಶ್ವ ವಿದ್ಯಾಪೀಠವನ್ನು ಆಗಸ್ಟ್​ 9ರಂದು ಬೆಳಗ್ಗೆ ಉದ್ಘಾಟಿಸಿದ ಬಳಿಕ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕಡಗೋಲಿನಲ್ಲಿ ಮೊಸರು ಕಡೆದು ಬೆಣ್ಣೆ ತೆಗೆದು ಶ್ರೀಕೃಷ್ಣನಿಗೆ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಧರ್ಮ ಪ್ರಸಾರ ಕಾರ್ಯ ಅನನ್ಯ

Nirmala 2
ಮಾತು ಆರಂಭಿಸಿದಾಗಿನಿಂದ ಕೊನೆವರೆಗೂ ಕಣ್ಣಂಚಲಿ ನೀರು ಸುರಿಸುತ್ತ ಭಾವುಕರಾಗಿ ಮಾತನಾಡುತ್ತಲೇ ಇದ್ದ ನಿರ್ಮಲಾ, ಈ ಹಿಂದೆ ನಾನು ಅದಮಾರು ಮಠದ ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಬಂದಿದ್ದೆ. ಈ ಬಾರಿ ನನಗೆ ಡಬಲ್​ ಆಶೀರ್ವಾದ ಲಭಿಸಿದೆ. ಪುತ್ತಿಗೆ ಸುಗುಣೇಂದ್ರ ಶ್ರೀಗಳು ವಿಶ್ವಾದ್ಯಂತ ಶ್ರೀಕೃಷ್ಣನ ಸಂದೇಶ ಪಸರಿಸುತ್ತಿದ್ದಾರೆ. ಪ್ರತಿದಿನವೂ ಯಜ್ಞದ ರೀತಿಯಲ್ಲಿ ಕೋಟಿ ಗೀತಾ ಲೇಖನದ ಮೂಲಕ ಧರ್ಮ ಪ್ರಸಾರ, ಧರ್ಮದ ರಕ್ಷಣೆ ಮಾಡುತ್ತಿರುವ ಅನನ್ಯ ಕಾರ್ಯನ್ನು ವಿನಮ್ರವಾಗಿ ಗೌರವಿಸುತ್ತೇನೆ ಎಂದರು.

ನಿರ್ಮಲಾ ಅಲ್ಲ, ರುಕ್ಮಿಣಿ

ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಕರ್ಕಾಟಕ ಮಾಸದ ಪೂರ್ಣಿಮೆಯಂದು ಶ್ರೀಕೃಷ್ಣ ಮಂದಿರಕ್ಕೆ ಮತ್ತೊಮ್ಮೆ ರುಕ್ಮಿಣಿ ದೇವಿ ಬಂದಂತಿದೆ. ಏಕೆಂದರೆ, ನಿರ್ಮಲಾ ಸೀತಾರಾಮನ್​ ಅವರ ಮೂಲ ಹೆಸರೇ ರುಕ್ಮಿಣಿ ಎಂದಿದೆ. ಹೀಗಾಗಿ ಕೃಷ್ಣ ಪ್ರೇರಣೆಯಿಂದ ರುಕ್ಮಿಣಿ (ನಿರ್ಮಲಾ) ಅವರು ಇಲ್ಲಿಗೆ ಆಗಮಿಸಿ ದ್ವಾಪರ ಕಾಲದಲ್ಲಿ ರುಕ್ಮಿಣಿಯಿಂದ ಪೂಜಿಸಲ್ಪಟ್ಟ ಶ್ರೀಕೃಷ್ಣನ ವಿಶೇಷ ದರ್ಶನ ಹಾಗೂ ವಿಶೇಷ ಪೂಜೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.

21 ಸಲ ಬಜೆಟ್​ ಮಂಡಿಸಲಿ

Rukmini
ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಇದೇ ತಿಂಗಳ ಹುಣ್ಣಿಮೆಯಂದು ಚಂದ್ರನಿಗೆ ರಾಹು ಗ್ರಹಣ ಸಂಭವಿಸಲಿದೆ. ಚಂದ್ರನಿಗೆ ಗ್ರಹಣ ಬಾಧಿಸಲಿ. ಆದರೆ, ನಮ್ಮ ದೇಹವೆಂಬ ಚಂದ್ರನಿಗೆ ಗ್ರಹಣ ಬಾಧಿಸದಿರಲಿ. ವೈದ್ಯರೂ ವಿಫಲರಾದಾಗ ನಮಗೆಲ್ಲ ರಾಮ-ಅಚ್ಯುತ-ಗೋವಿಂದ ಎಂಬ ಜಪೌಷಧವೇ ಆಧಾರ. ಈ ತ್ರಿಮೂರ್ತಿಗಳು ತಲೆಎತ್ತಿ ನಿಲ್ಲುವ ವಾತಾವರಣ ಮೂಡಬೇಕು. ತ್ರೇತಾಯುಗದಲ್ಲಿ ಶ್ರೀರಾಮನು ನಿರ್ಮಲ ಬಜೆಟ್​ ಮಂಡಿಸುತ್ತಿದ್ದನು. ದ್ವಾಪರದಲ್ಲಿ ದ್ರೌಪದಿ ವಿತ್ತ ಮಂತ್ರಿಯಾಗಿದ್ದಳು. ಅದರಂತೆ ಕಲಿಯುಗದಲ್ಲಿ ಸೀತಾರಾಮನು ನಿರ್ಮಲವಾದ ಬಜೆಟ್​ ಈ ದೇಶಕ್ಕೆ ಬೇಕೆಂಬ ದೃಷ್ಟಿಯಿಂದ ನಿರ್ಮಲಾ ಸೀತಾರಾಮನ್​ ಅವರಿಗೆ ವಿತ್ತ ಸಚಿವೆಯ ಅವಕಾಶ ನೀಡಿದ್ದಾನೆ. ದೇಶ ಉಳಿದರೆ ನಾವು ಉಳಿಯಲು ಸಾಧ್ಯ. ಪರಶುರಾಮನು ಭಾರ್ಗವ ರಾಮನಾಗಿ 21 ಸಲ ಭೂ ಪ್ರದಕ್ಷಿಣೆ ಮಾಡಿ ದುಷ್ಟರ ಕೈಯಲ್ಲಿದ್ದ ಸಂಪತ್ತನ್ನು ಪಡೆದು ಶಿಷ್ಟರ ಕೈಗೆ ಕೊಟ್ಟು ದೇಶವನ್ನು ಸುಭೀಕ್ಷವನ್ನಾಗಿಸಿದ್ದ. ಅದೇ ರೀತಿಯಲ್ಲಿ ನಿರ್ಮಲಾ ಅವರೂ ಸಹ ಭಾರ್ಗವಿಯಾಗಿ 21 ಸಲ ಬಜೆಟ್​ ಮಂಡಿಸಿ ದೇಶವನ್ನು ಸಮೃದ್ಧಗೊಳಿಸಲಿ ಎಂದು ಹಾರೈಸಿದರು.

ಪುತ್ತಿಗೆ ಕಿರಿ ಯತಿ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ದಿನೇಶಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡು ಉದ್ಯಮಿ ರವಿ ಸ್ಯಾಮ್​, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್​ಪಾಲ್​ ಸುವರ್ಣ, ಮಠದ ದಿವಾನ ನಾಗರಾಜ ಆಚಾರ್ಯ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಹಿತೋಷ್ ಆಚಾರ್ಯ, ರಮೇಶ್ ಭಟ್ ಇನ್ನಿತರರು ಉಪಸ್ಥಿತರಿದ್ದರು.

ಪುತ್ತಿಗೆ ಮಠದ ವಿದ್ವಾನ್​ ಡಾ. ಬಿ.ಗೋಪಾಲಾಚಾರ್ಯ ಹಾಗೂ ರಘೂತ್ತಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಉಷಾ ಹೆಬ್ಬಾರ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಭಾರತ ಲಕ್ಷ್ಮೀ ಬಿರುದು ಪ್ರದಾನ

Nirmala Award
ಸಚಿವೆ ನಿರ್ಮಲಾ ಅವರಿಗೆ ಭಾರತ ಲಕ್ಷ್ಮೀ ಬಿರುದು ಪ್ರದಾನ ಮಾಡಿದ ಸುಗುಣೇಂದ್ರ ಶ್ರೀ ಮಾತನಾಡಿ, ನಿರ್ಮಲಾ ಅವರು ದೇಶದ ಭಾಗ್ಯ ದೇವತೆ. ಬಹುತೇಕ ಎಲ್ಲರ ಮನೆಯಲ್ಲೂ ಆರ್ಥಿಕ ವಹಿವಾಟಿನ ಜವಾಬ್ದಾರಿ ಹೆಂಡತಿಯದ್ದೇ ಆಗಿರುತ್ತದೆ. ಎಲ್ಲ ಸಂಪತ್ತೂ ಸಹ ಲಕ್ಷ್ಮೀ ಬಳಿಯೇ ಇದೆಯೆಂದು ಶಾಸ್ತ್ರವೂ ಹೇಳುತ್ತದೆ. ಅದೇ ರೀತಿ ನಿರ್ಮಲಾ ಅವರು ಆರ್ಥಿಕ ಮಂತ್ರಿಯಾಗಿ ದೇಶದ ಬಜೆಟ್​ ಮಂಡಿಸುವ ಮೂಲಕ ಭಾರತದ ಲಕ್ಷ್ಮೀ ಆಗಿದ್ದಾರೆ. ಅವರ ಮಹತ್​ ಕಾರ್ಯ ಗುರುತಿಸಿ ಶ್ರೀಕೃಷ್ಣ ಮಠದಿಂದ ಭಾರತ ಲಕ್ಷ್ಮೀ ಎಂಬ ಬಿರುದು ನೀಡುತ್ತಿದ್ದೇವೆ. ಪ್ರಸ್ತುತವಾಗಿ ದೇಶ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದು ಅದನ್ನು ಸಮರ್ಥವಾಗಿ ಎದುರಿಸಿ, ಪಾರಾಗುವ ಶಕ್ತಿಯನ್ನು ಹಾಗೂ ಭಾರತವು ವಿಶ್ವಗುರು ಆಗುವುದರಲ್ಲಿ ಶ್ರೀಕೃಷ್ಣನ ಸಂಪೂರ್ಣ ಅನುಗ್ರಹ ಲಭಿಸಲಿ ಎಂದು ಆಶೀರ್ವದಿಸಿದರು. ಷಣ್ಮುಖ ಆಚಾರ್ಯ ಪ್ರಶಸ್ತಿ ಪತ್ರ ವಾಚಿಸಿದರು.

ಹೂವಿನ ದಂಡೆ ಕಟ್ಟಿ, ಪಾತ್ರೆ ತೊಳೆದ ಸುಧಾಮೂರ್ತಿ

Sudha Box
ಸರಳತೆಯಿಂದಲೇ ಗಮನ ಸೆಳೆಯುವ ಇನ್ಫೋಸಿಸ್​ ಸಂಸ್ಥಾಪಕಿ ಸುಧಾಮೂರ್ತಿ ಅವರು ಶ್ರೀಕೃಷ್ಣ ಮಠದಲ್ಲೂ ಗಮನ ಸೆಳೆದರು. ಕೃಷ್ಣನ ಗುಡಿಯ ಪಕ್ಕದಲ್ಲಿ ನಿತ್ಯವೂ ಹೂವಿನ ದಂಡೆ ಕಟ್ಟುವ ಸ್ಥಳಕ್ಕೆ ಆಗಮಿಸಿ, ಅಲ್ಲಿಯ ಕಟ್ಟೆಯ ಮೇಲೆ ಕುಳಿತು ಕೆಲಕಾಲ ಹೂವಿನ ಹಾರ, ದಂಡೆ ಕಟ್ಟಿದರು. ಬಳಿಕ ಭೋಜನ ಶಾಲೆಯಲ್ಲಿ ಪಾತ್ರೆ ತೊಳೆದರು. ತುಳಸಿ ಹಾಗೂ ಗೋ ಪೂಜೆ ಮಾಡಿದರು. ನಿರ್ಮಲಾ ಅವರೊಂದಿಗೆ ಹೊಸ್ತಿಲು ಪೂಜೆಯನ್ನೂ ಮಾಡಿದರು. ವಿದೇಶದಲ್ಲಿ ಮನೆ ಕಟ್ಟಬಹುದು. ಆದರೆ, ಮಠ ಕಟ್ಟುವುದು ಸುಲಭಲ್ಲ. ವಿದೇಶದಲ್ಲೂ ಭಾರತೀಯರನ್ನು ಒಗ್ಗೂಡಿಸುವ ಕಾರ್ಯ ಸುಗುಣೇಂದ್ರ ಶ್ರೀಗಳಿಂದ ಆಗಿದೆ. ಜನರನ್ನು ಒಗ್ಗೂಡಿಸಿವುದೇ ಧರ್ಮ. ಮಹಿಳೆಯರಲ್ಲಿ ಬೇಕಷ್ಟು ಶಕ್ತಿ ಇದೆ. ಆದರೆ, ಅದರ ಅರಿವಿನ ಕೊರತೆಯಿದೆ. ಯಶಸ್ವಿ ಪುರುಷನ ಹಿಂದೆ ಅಲ್ಲ, ಜತೆಯಲ್ಲೇ ಮಹಿಳೆ ಇರುತ್ತಾಳೆ. ತಂತ್ರಜ್ಞಾನಕ್ಕೂ ಸಂಸ್ಕೃತಿಗೂ ಯಾವುದೇ ಸಂಬಂಧವಿಲ್ಲ. ಭಾರತೀಯ ಸಂಸ್ಕೃತಿ ಉಳಿವು ಮಹಿಳೆಯಿಂದ ಮಾತ್ರ ಸಾಧ್ಯ. ಹೀಗಾಗಿ ಮಕ್ಕಳಿಗೆ ಸತ್ಯ-ಧರ್ಮದ ಮಹತ್ವ ತಿಳಿಸಿ. ಹಣ ಸಾಧನ ಮಾತ್ರ. ಹಣಗಳಿಕೆಯೇ ಸಾಧನೆಯಲ್ಲ. | ಸುಧಾಮೂರ್ತಿ. ಇನ್ಫೋಸಿಸ್​ ಸಂಸ್ಥಾಪಕಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net