

ಚನ್ನರಾಯಪಟ್ಟಣ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಒದಗಿಸಬೇಕೆಂಬ ದೀರ್ಘಕಾಲದ ಬೇಡಿಕೆಗೆ ಕಾಲ ಕೂಡಿ ಬಂದಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳೆ ಸಬಲೀಕರಣ ಕೋಶ, ಭಾರತೀಯ ಯುವ ರೆಡ್ ಕ್ರಾಸ್ ಘಟಕ. ಐಕ್ಯೂಎಸಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಸ್ತನ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಿದೆ. ಇದು ದೇಶದ ಮಹಿಳೆಯರಿಗೆ ರಾಜಕೀಯವಾಗಿ ಹೊಸ ಶಕ್ತಿ ತಂದುಕೊಡಲಿದೆ. ಕರ್ನಾಟಕ ರಾಜ್ಯ ವಿಧಾನಸಭೆ 224 ಕ್ಷೇತ್ರಗಳ ಪೈಕಿ 74 ಕೇತ್ರಗಳಲ್ಲಿ ಮಹಿಳೆಯರು ಆಯ್ಕೆಯಾಗಲಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ದೇಶ ಪ್ರಗತಿ ಸಾಧಿಸಬೇಕಾದರೆ ಪುರುಷ ಮತ್ತು ಮಹಿಳೆ ಇಬ್ಬರ ಕಾಣಿಕೆ ಬಹಳ ಮುಖ್ಯ, ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ, ಸಮಾನತೆ, ಸಮಾನ ಗೌರವ ದೊರೆತರೆ ಆ ದೇಶ ಸಮೃದ್ಧಿಯ ನಾಡಾಗುತ್ತದೆ. ಒಂದು ದೇಶದ ಆರ್ಥಿಕ ಪ್ರಗತಿಯ ಸಾಧನೆಯಾಗಿ ಮಹಿಳೆ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಕಿರಣ್ ಮಜುಮ್ದಾರ್, ಸಾಲುಮರದ ತಿಮ್ಮಕ್ಕ ಇನ್ನೂ ಹಲವಾರು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ನೈಪುಣ್ಯ, ಧೈರ್ಯ ಪ್ರದರ್ಶಿಸಿದ್ದಾರೆ. ಪ್ರಸ್ತುತ ದೌಪದಿ ಮುರ್ಮು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ಮಹಿಳೆಯರಿಗೆ ಗೌರವ ತರುವ ಸಂಗತಿಯಾಗಿದೆ ಎಂದರು.
ರೆಡ್‌ಕ್ರಾಸ್ ಘಟಕದ ತಾಲೂಕು ಸಭಾಪತಿ ಭರತ್ ಕುಮಾರ್ ಮಾತನಾಡಿ, ಹೆಣ್ಣುಮಕ್ಕಳು ಬಿಗಿ ಉಡುಪು ಗಳನ್ನು ಧರಿಸಿದರೂ ಕ್ಯಾನ್ಸರ್ ಬರುತ್ತದೆ. ಇತ್ತೀಚಿನ ಊಟದ ರೀತಿ ನೀತಿಗಳು ಸರಿಯಿಲ್ಲ. ನಿಮ್ಮ ಜೀವನ ಶೈಲಿಯನ್ನು ಬದ ಲಾಯಿಸಿಕೊಳ್ಳುವ ಮೂಲಕ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇ ಜಿನ ಪ್ರಾಂಶುಪಾಲ ಎಸ್.ಎಚ್.ಗಂಗೇಗೌಡ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ತನ ಕ್ಯಾನ್ಸರ್ 28 ಜನರಲ್ಲಿ ಒಬ್ಬರಿಗೆ ಕಡ್ಡಾಯವಾಗಿ ಬರುತ್ತಿದೆ. ಇದು ಅನುವಂಶಿಕವಾಗಿಯೂ ಬರಬಹುದು. ಇಲ್ಲವೆ ಅನುತ್ಪಾದಕ ಜೀವಕೋಶಗಳಿಂದಲೂ ಬರಬಹುದು. ಆದ್ದರಿಂದ ಪ್ರಾರಂಭದ ಹಂತದಲ್ಲೇ ರೋಗಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸಿಕೊಳ್ಳುವುದು ಉತ್ತಮ ಎಂದರು.
ಮೈಸೂರು ನಾರಾಯಣ ಹೃದಯಾಲಯದ ಅಂಕೋಲೊಜಿಸ್ಟ್ ಡಾ.ಯಶಸ್ವಿನಿ ಮಾತನಾಡಿ, ಸ್ತನ ಕ್ಯಾನ್ಸರ್ ಪ್ರಾರಂಭದಲ್ಲೇ ಗುರುತಿಸಿದರೆ ಜೀವ ಉಳಿಸಬಹುದು. 40 ವರ್ಷ ಮೀರಿದ ಹೆಣ್ಣುಮಕ್ಕಳು ಎರಡು ವರ್ಷಕ್ಕೊಮ್ಮೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಕಾಯಿಲೆ ನಮಗೆ ಮಾರಕವಲ್ಲ. ಆದರೆ ಮೈಮರೆತರೆ ನಮ್ಮ ಜೀವವೆ ಹೋಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಪಾಲಕರು, ಬೋಧಕ ಸಿಬ್ಬಂದಿ ವರ್ಗದವರಿಗೆ ಉಚಿತ ಮಧುಮೇಹ, ರಕ್ತದ ಒತ್ತಡ, ಹೃದಯ ತಪಾಸಣೆ ಮಾಡಲಾಯಿತು. ಅಲ್ಲದೆ ಸ್ತನ ಕ್ಯಾನ್ಸರ್, ಸ್ತ್ರೀ ರೋಗ ತಪಾಸಣೆ ನಡೆಸಲಾಯಿತು.
ಕಾಲೇಜಿನ ಕಚೇರಿ ಅಧೀಕ್ಷಕ ಎಚ್.ಎಲ್. ಕೃಷ್ಣ, ಎಲ್‌ಐಕ್ಯೂಎಸಿ ಸಂಚಾಲಕ ವಾಸುದೇವ್ ಪ್ರಸಾದ್, ಡಾ.ಬಿ.ಎಸ್.ಪೂರ್ಣಿಮಾ, ಭಾರತೀಯ ಯುವ ರೆಡ್‌ಕ್ರಾಸ್ ಘಟಕದ ರೂಪ, ಜಬೀವುಲ್ಲಾ ಬೇಗ್, ಕಾಲೇಜಿನ ಎಲ್ಲ್ಲ ಪ್ರಾಧ್ಯಾಪಕರು ಉಪನ್ಯಾಸಕರು ಭಾಗವಹಿಸಿದ್ದರು.