ಹಾವೇರಿ ಜಿಲ್ಲೆಗೆ ‘ಕೈಕೊಟ್ಟ’ ಕೇಂದ್ರ ಬರ ಅಧ್ಯಯನ ತಂಡ !

CROP DISTROYED
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬರ ಘೊಷಿಸಿರುವ ಐದು ತಾಲೂಕುಗಳಲ್ಲಿ 1,66,280 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸದಿರುವುದು ರೈತ ವಲಯದಲ್ಲಿ ಬೇಸರ ಮೂಡಿಸಿದೆ.

ರಾಜ್ಯ ಸರ್ಕಾರ ಜಿಲ್ಲೆಯ ಹಾವೇರಿ, ಹಿರೇಕೆರೂರ, ರಾಣೆಬೆನ್ನೂರ, ಹಾನಗಲ್ಲ ಹಾಗೂ ಸವಣೂರ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದೆ. ಬ್ಯಾಡಗಿ, ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಂತೆ ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜಿಲ್ಲೆಯಲ್ಲಿ ರೈತ ಸಂಘಟನೆಗಳು ಬಲಿಷ್ಠವಾಗಿದ್ದು, ಕೇಂದ್ರ ತಂಡ ಆಗಮಿಸಿದ ವೇಳೆ ರೈತರು ಘೇರಾವ್ ಹಾಕಿ ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ತಂಡ ಜಿಲ್ಲೆಗೆ ಬಂದಿಲ್ಲ ಎನ್ನಲಾಗುತ್ತಿದೆ.

ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಬರ ಪರಿಹಾರ ಘೊಷಿಸುತ್ತದೆ. ನಂತರವೇ ರೈತರಿಗೆ ಪರಿಹಾರ ದೊರೆಯುತ್ತದೆ. ಕೇಂದ್ರ ತಂಡ ಆಗಮಿಸಿದರೂ ಕೆಲವೊಮ್ಮೆ ವಾಸ್ತವ ಸ್ಥಿತಿ ಮನದಟ್ಟು ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿರುತ್ತದೆ. ಹೀಗಿರುವಾಗ ಕೇಂದ್ರದ ತಂಡವೇ ಬಾರದೇ ಸಮರ್ಪಕ ಪರಿಹಾರ ದೊರಕಿಸಿಕೊಡುವುದು ಮತ್ತಷ್ಟು ಸವಾಲಾಗುವ ಆತಂಕ ಎದುರಾಗಿದೆ.

ಪಕ್ಕದ ಧಾರವಾಡ, ಗದಗ, ಬೆಳಗಾವಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ಅಧ್ಯಯನ ನಡೆಸಿದೆ. ಆದರೆ, ಹಾವೇರಿ ಜಿಲ್ಲೆಗೆ ಕೇಂದ್ರ ತಂಡ ಬಾರದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರ ತಂಡ ಬಾರದಿದ್ದರೂ ಜಿಲ್ಲೆಯ ವರದಿ ಆಧಾರದಲ್ಲಿ ಸೂಕ್ತ ಪರಿಹಾರ ದೊರೆಯುತ್ತದೆ ಎಂಬ ಅಧಿಕಾರಿಗಳ ವಾದವನ್ನು ರೈತರು ಒಪ್ಪುತ್ತಿಲ್ಲ. ಹಾಗಾಗಿ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಗಮನ ಹರಿಸಬೇಕು. ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಬರುವಂತೆ ಒತ್ತಾಯಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಜಿಲ್ಲೆಯ ಮೂರು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಂತೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಂಡ ಜಿಲ್ಲೆಗೆ ಬಂದಿಲ್ಲ ಎನ್ನಲಾಗುತ್ತಿದೆ. ಅವರು ಜಿಲ್ಲೆಗೆ ಬಂದಿದ್ದರೆ ವಾಸ್ತವ ಸ್ಥಿತಿ ಗೊತ್ತಾಗುತ್ತಿತ್ತು. ಈಗಲೂ ಕೇಂದ್ರ ತಂಡ ಜಿಲ್ಲೆಗೆ ಬಂದರೆ ಅಧ್ಯಯನಕ್ಕೆ ನಾವು ಅವಕಾಶ ಮಾಡಿಕೊಡುತ್ತೇವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. | ರಾಮಣ್ಣ ಕೆಂಚಳ್ಳೇರ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗುವುದಿಲ್ಲ. ರ್ಯಾಂಡಮ್ ಆಗಿ ಕೆಲ ಜಿಲ್ಲೆಗಳಲ್ಲಿ ಅಧ್ಯಯನ ಮಾಡುತ್ತದೆ. ಈ ವರದಿ ಆಧಾರದಲ್ಲೇ ಕೇಂದ್ರ ಸರ್ಕಾರ ಇಡೀ ರಾಜ್ಯದ ಬರ ಪರಿಹಾರದ ಪ್ರಮಾಣದ ಕುರಿತು ತೀರ್ವನಿಸುತ್ತದೆ. ಈ ಬಾರಿ ಹಾವೇರಿ ಜಿಲ್ಲೆ ಆಯ್ಕೆ ಮಾಡಿಲ್ಲ. ಆದರೆ, ಜಿಲ್ಲೆಯಿಂದ ವಿಸõತವಾದ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈಗಾಗಲೇ ರವಾನಿಸಲಾಗಿದೆ. | ಮಂಜುನಾಥ ಅಂತರವಳ್ಳಿ, ಜಂಟಿ ಕೃಷಿ ನಿರ್ದೇಶಕ, ಹಾವೇರಿ ಕೇಂದ್ರ ಬರ ಅಧ್ಯಯನ ತಂಡ 31 ಜಿಲ್ಲೆಗಳ ಪೈಕಿ 14 ಜಿಲ್ಲೆಗಳಿಗೆ ಮಾತ್ರ ಭೇಟಿ ನೀಡಿ ಅಧ್ಯಯನ ಮಾಡುತ್ತಿದೆ. ರೂಟ್​ಗೆ ಅನುಕೂಲ ಆಗುವ ರೀತಿ ವೇಳಾಪಟ್ಟಿ ಹಾಕಿಕೊಂಡಿದ್ದಾರೆ. ಈಗಾಗಲೇ ಸಲ್ಲಿಸಿರುವ ವರದಿ ಕುರಿತು ಕೆಲವೇ ಸ್ಥಳಗಳ ಪರಿಶೀಲನೆಗಾಗಿ ಬಂದಿದ್ದಾರೆ. ಪರಿಹಾರ ಘೊಷಣೆ ಮಾಡುವಾಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಇದರಿಂದ ಜಿಲ್ಲೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. | ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net