ವಾರಸುದಾರರಿಲ್ಲದ ವಾಹನಗಳ ಪಟ್ಟಿ ನೀಡಲು ಕೇಂದ್ರ ಪಾಲಿಕೆ ಆಯುಕ್ತರ ಸೂಚನೆ

central palike
Published on

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರಸುದಾರರಿಲ್ಲದ ವಾಹನಗಳನ್ನು ಗುರುತಿಸಿ ಸಂಚಾರ ಪೊಲೀಸ್ ವಿಭಾಗಕ್ಕೆ ಪಟ್ಟಿ ನೀಡಲು ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಿವಿಧ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಹಲವು ದಿನಗಳಿಂದ ರಸ್ತೆ ಬದಿಯೇ ನಿಂತಿರುವಂತಹ ವಾರಸುದಾರರಿಲ್ಲದ ವಾಹನಗಳಿಂದ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕಾಗಿ ರಸ್ತೆ ಬದಿ ನಿಲ್ಲಿಸಿರುವ ವಾಹನಗಳ ಪಟ್ಟಿ ತಯಾರಿಸಿ, ಅದನ್ನು ಸಂಚಾರ ಪೊಲೀಸರಿಗೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸ್ವಚ್ಛವಾಗಿಡದ ವಾಣಿಜ್ಯ ಮಳಿಗೆಗೆ ನೋಟೀಸ್:

ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ತಮ್ಮ ಆವರಣದಲ್ಲಿ ಯಾವುದೇ ಕಸ ಇರದಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅದನ್ನು ಪಾಲಿಸದಿದ್ದರೆ ದಂಡ ವಿಧಿಸಬೇಕು. ಜತೆಗೆ ಎಲ್ಲ ವಾಣಿಜ್ಯ ಸಂಸ್ಥೆಗಳಿಗೆ ಆವರಣವನ್ನು ಶುಚಿಯಾಗಿಟ್ಟುಕೊಳ್ಳುವಂತೆ ನೋಟಿಸ್ ನೀಡಲಾಗುವುದು. ಇದೇ ರೀತಿ ಕಟ್ಟಡ ನಿರ್ಮಾಣ ಮಾಡುವವರು ಫುಟ್‌ಪಾತ್ ಮೇಲೆ ಬಿಲ್ಡಿಂಗ್‌ನ ಭಗ್ನಾವಶೇಷ ಅಥವಾ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಿದರೆ ಅಂತಹವರಿಗು ದಂಡ ವಿಧಿಸಲು ಸೂಚನೆ ನೀಡಿದರು.

ಜಂಕ್ಷನ್‌ಗಳ ಸುತ್ತಲಿನ ರಸ್ತೆ ಸುಸ್ತಿತಿಯಲ್ಲಿಡಿ:

ಜಂಕ್ಷನ್‌ಗಳಲ್ಲಿ ಸುಗಮ ಸಂಚಾರ ಇರಬೇಕು. ಇದಕ್ಕಾಗಿ ಪ್ರಮುಖ ಜಂಕ್ಷನ್‌ಗಳಿಗೆ ಸಂಪರ್ಕಿಸುವ ರಸ್ತೆಗಳ 200 ಮೀ. ದೂರದವರೆಗೆ ಗುಂಡಿಗಳು, ಮೇಲ್ಮೈ ಪದರ ಹಾಗೂ ಯಾವುದೇ ಅಡ್ಡಿ ಉಂಟಾಂಗದಂತೆ ವಾಹನಗಳು ಸುಗಮವಾಗಿ ಸಂಚರಿಸುವಂತೆ ಮಾಡಲು ಆಯುಕ್ತರು ಸೂಚಿಸಿದರು.

ಈ ವೇಳೆ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಘನತ್ಯಾಜ್ಯ ನಿಗಮದ ಡಿಜಿಎಂ, ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.

ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ಸೂಚನೆ:

ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ ಮತ್ತು ಜಾಸ್ಮಾದೇವಿ ಭವನ ರಸ್ತೆಗಳಲ್ಲಿ ಕಾರು ಪಾರ್ಕಿಂಗ್ ಮಾಡಿರುವುದನ್ನು ಗಮನಿಸಿ, ದೀರ್ಘ ಅವಧಿಗೆ ನಿಲುಗಡೆ ಮಾಡಿರುವ ಇಂತಹ ರಸ್ತೆಗಳ ಪಟ್ಟಿಯನ್ನು ಗುರುತಿಸಿ, ಪಾರ್ಕಿಂಗ್ ನೀತಿಯನ್ನು ಬಳಸಿಕೊಂಡು ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಆಯುಕ್ತರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net