ಬಡತನ ನಿರ್ಮೂಲನೆಗೆ ಕೇಂದ್ರ ಸಂಕಲ್ಪ

h16-vikasita bharata
Published on

ಹುಬ್ಬಳ್ಳಿ: ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ಉದ್ಯೋಗ, ಮನೆ ಸೇರಿದಂತೆ ಸಕಲ ಸೌಲಭ್ಯ ಕಲ್ಪಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ವೀರಾಪುರ ಓಣಿಯ ಮಹಾಬಲೇಶ್ವರ ದೇವಸ್ಥಾನದ ಬಳಿ ಶನಿವಾರ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗ ದೇಶದ ಆರ್ಥಿಕ ಪರಿಸ್ಥಿತಿ ಕೈಮೀರಿತ್ತು. ಈಗ ಜಗತ್ತಿನ ಐದು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. 13 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದರು.
ಒಂಬತ್ತು ವರ್ಷಗಳಲ್ಲಿ 3.40 ಕೋಟಿ ಮನೆ ನಿರ್ಮಿಸಲಾಗಿದೆ. ಮಧ್ಯಮವರ್ಗದವರಿಗೆ ಮನೆ ಕಟ್ಟಿಕೊಳ್ಳಲು 25 ಲಕ್ಷ ರೂ.ವರೆಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. 10 ಕೋಟಿ ಜನರಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಸಿಲಿಂಡರ್ ನೀಡಲಾಗಿದೆ ಎಂದು ವಿವರಿಸಿದರು.ಸ
ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ನವೆಂಬರ್ 15ರಿಂದ ಜಾರ್ಖಂಡ್‌ನಿಂದ ಆರಂಭಿಸಲಾಗಿದೆ. ದೇಶದ ಎಲ್ಲ ಗ್ರಾಮ ಪಂಚಾಯಿತಿ, ವಾರ್ಡ್‌ಗಳಿಗೆ ಈ ಯಾತ್ರೆಯ ವಾಹನ ಹೊರಡಲಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಬಿಜೆಪಿ ಧಾರವಾಡ ಜಿಲ್ಲಾ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಶಶಿಕಾಂತ ಬಿಜವಾಡ ಮಾತನಾಡಿದರು.
ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್ ಕಿಟ್, ಸಾಲ ವಿತರಣಾ ಪತ್ರ ವಿತರಿಸಲಾಯಿತು.
ಮೇಯರ್ ವೀಣಾ ಬರದ್ವಾಡ, ಮಹಾನಗರ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ, ಪ್ರಭು ನವಲಗುಂದಮಠ, ವೀರಣ್ಣ ಸಿಂತ್ರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net