

ಬಾಳೆಹೊನ್ನೂರು: ಭದ್ರಾ ಹುಲಿ ಯೋಜನೆಯ ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.
ಭದ್ರಾ ಹುಲಿ ಯೋಜನೆ, ಬಫರ್ ಜೋನ್, ಪರಿಸರ ಸೂಕ್ಷ್ಮವಲಯ ಘೊಷಣೆ ವಿರೋಧಿಸಿ ಅ.15ರಂದು ಎನ್.ಆರ್.ಪುರದಲ್ಲಿ ರೈತರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸರ್ವ ಪಕ್ಷಗಳ ಹೋರಾಟದ ನಂತರ ಸಂಸದೆ ಶೋಭಾ ಕರಂದ್ಲಾಜೆ ಸಿಎಂಬಳಿ ರೈತರು, ಜನಪ್ರತಿನಿಧಿಗಳ ನಿಯೋಗ ಕರೆದೊಯ್ದಿದ್ದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಯೋಗದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ಸಿಎಂ ಇಎಸ್ಜೆಡ್ನ ಡ್ರಾಫ್ಟ್ ನೋಟಿಫಿಕೇಶನ್ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಪ್ರಸ್ತಾವಿತ ಯೋಜನೆಗಳ ಬಗ್ಗೆ ಪರಿಶೀಲಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಡಿ.2ರಂದು ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಸಿಎಂಗೆ ಮರು ಪತ್ರ ಬರೆದು ಭದ್ರಾ ಹುಲಿ ಯೋಜನೆ ಪರಿಸರ ಸೂಕ್ಷ್ಮ ವಲಯದ ಕುರಿತು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆ ಬಹಿಷ್ಕಾರ ಹಿಂಪಡೆಯುವುದು ಒಳಿತು. ಪರಿಷ್ಕೃತ ಪ್ರಸ್ತಾವನೆಗೆ ಸೂಕ್ಷ್ಮವಲಯದ ಪ್ರಕ್ರಿಯೆಗಳು ಮತ್ತೆ ಗ್ರಾಪಂ ಮಟ್ಟದಿಂದ ಹೊಸದಾಗಿ ಆರಂಭವಾಗಬೇಕಿದೆ ಎಂದರು.