ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ಶೀಘ್ರ ಗುಂಡಿಮುಕ್ತ: ಆಯುಕ್ತ ಪಿ. ರಾಜೇಂದ್ರ ಚೋಳನ್ ಹೇಳಿಕೆ

central palike
Published on

ಬೆಂಗಳೂರು: ಜಿಬಿಎ ವ್ಯಾಪ್ತಿಯ ಕೇಂದ್ರ ನಗರ ಪಾಲಿಕೆ ಪ್ರದೇಶದಲ್ಲಿರುವ ಎಲ್ಲ ರಸ್ತೆಗುಂಡಿಗಳನ್ನು ಕಾಲಮಿತಿಯೊಳಗೆ ಮುಚ್ಚಲು ಕ್ರಮ ಕೈಗೊಂಡಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನೂತನ ಆಯುಕ್ತ ಪಿ.ರಾಜೇಂದ್ರ ಚೋಳನ್ ಭರವಸೆ ನೀಡಿದ್ದಾರೆ.

ಕೇಂದ್ರ ನಗರ ಪಾಲಿಕೆ ಕಚೇರಿಗೆ ಗುರುವಾರ ಭೇಟಿ ನೀಡಿ ಹಿರಿಯ ಅಧಿಕಾರಿಗಳು ಹಾಗೂ ಅಭಿಯಂತರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಈ ಅಭಯ ನೀಡಿದರು.

ಸಾರ್ವಜನಿಕ ಸಂಚಾರ, ಮೂಲಸೌಕರ್ಯ ಉತ್ತಮಗೊಳಿಸುವ ಉದ್ದೇಶದಿಂದ ಗುಂಡಿಮುಕ್ತ ರಸ್ತೆ, ಬ್ಲಾಕ್ ಸ್ಪಾಟ್ ರಹಿತ ಮತ್ತು ಒತ್ತುವರಿ ಮುಕ್ತ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಸದ್ಯ ಸತತ ಮಳೆಯಿಂದಾಗಿ ಯಾವುದೇ ಅನಾಹುತ ಉಂಟಾಗದಂತೆ ಮುಂಜಾಗ್ರತೆ ವಹಿಸಲು, ರಸ್ತೆ ಗುಂಡಿಗಳು ಮತ್ತು ಇನ್ನಿತರ ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲಾಗುವುದು. ಇದರಿಂದ ಪ್ರಮುಖ ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಅವಕಾಶವಾಗಲಿದೆ. ರಸ್ತೆ ಗುಂಡಿಗಳಿಗೆ ಸಂಬಂಧಿಸಿ ವೆಬ್ ಅಥವಾ ಅಪ್ಲಿಕೇಶನ್‌ಗಳಲ್ಲಿ ಯಾವುದೇ ದೂರು ಬಾಕಿ ಇರದಂತೆ ಕ್ರಮ ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಾದರಿ ರಸ್ತೆಗಳ ಅಭಿವೃದ್ಧಿ:

ಸಿಬಿಡಿ ರಸ್ತೆಗಳು, ಟೆಂಡರ್ ಶ್ಯೂರ್ ರಸ್ತೆ, ವೈಟ್ ಟಾಪಿಂಗ್ ರಸ್ತೆಗಳು ಮತ್ತು ಹೈ ಡೆನ್ಸಿಟಿ ಕಾರಿಡಾರ್ ಗಳನ್ನು ಗುರುತಿಸಿ, ಮಾದರಿ ರಸ್ತೆಗಳನ್ನಾಗಿ ಮಾಡಲಾಗುವುದು. ಈ ರೀತಿ ಗುರುತಿಸಲ್ಪಡುವ ರಸ್ತೆಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸಿ ನಿರ್ವಹಣೆ ಜವಾಬ್ದಾರಿ ವಹಿಸಲಾಗುವುದು. ಮೆಟ್ರೋ ಪಿಲ್ಲರ್‌ಗಳ ಸೌಂದರೀಕರಣ, ರಸ್ತೆ ಇಕ್ಕೆಲಗಳ ಸೌಂದರೀಕರಣಕ್ಕಾಗಿ ಗಿಡಗಳನ್ನು ನೆಡುವಂತೆ, ಅಗತ್ಯ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿ ಅವುಗಳ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲು ಆಯುಕ್ತರು ನಿರ್ದೇಶಿಸಿದರು.

ಈ ವೇಳೆ ಕೇಂದ್ರ ನಗರ ಪಾಲಿಕೆ ಜಂಟಿ ಆಯುಕ್ತ ರಂಗನಾಥ್, ಮುಖ್ಯ ಅಭಿಯಂತರಾದ ಸುಗುಣಾ, ವಿಜಯಕುಮಾರ್ ಹರಿದಾಸ್ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಫುಟ್‌ಪಾತ್ ಒತ್ತುವರಿ ತೆರವಿಗೆ ಅಭಿಯಾನ:

ಪ್ರತಿ ವಾರ ಒಂದು ರಸ್ತೆ ಮಾರ್ಗವನ್ನು ಗುರುತಿಸಿ ಫುಟ್‌ಪಾತ್ ಒತ್ತುವರಿದಾರರಿಗೆ ಒಂದು ದಿನದ ಮುಂಚಿತವಾಗಿ ನೋಟಿಸ್ ನೀಡಿ ಎಚ್ಚರಿಸಿ, ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ಜತೆಗೆ ಸ್ವಚ್ಛತೆ ಕಾಪಾಡಲು ಈ ಎರಡೂ ವಿಷಯದಲ್ಲಿ ಅಭಿಯಾನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜೇಂದ್ರ ಚೋಳನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net