

ಬೆಳಗಾವಿ:ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 95 ಗ್ರಾಂ ಚಿನ್ನ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಮಹಾರಾಷ್ಟ್ರದ ಔರಂಗಬಾದ್ ಪ್ರಕಾಶ ಜಾಧವ (46), ಮಿಡಸಾಂಗವಿ ಕಾಳಿದಾಸ ಬರಡೆ (27) ಬಂಧಿತರು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ನಿಂದ ಇಳಿಯುವ ಸಂದರ್ಭದಲ್ಲಿ ಕೆಲವರ ಬಂಗಾರದ ಚಿನ್ನಾಭರಣಗಳ ಕಳ್ಳತನ ಮಾಡಲಾಗಿತ್ತು. ಈ ಕುರಿತು ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದ ಪುಂಡಲೀಕ ಲೆಂಕನ್ನವರ ನೀಡಿದ ದೂರಿನ ಆಧಾರದ ಮೇಲೆ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ, ಪಿಐ ಮಹಾಂತೇಶ ದ್ಯಾಮಣ್ಣವರ ನೇತೃತ್ವದ ತಂಡ ಇಬ್ಬರು ಕಳ್ಳರನ್ನು ಬಂಧಿಸಿ 9,31,000 ರೂ. ಮೌಲ್ಯದ 95 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.