ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 5 ಶಾಖೆ ಶೀಘ್ರ,  ಸಂಸ್ಥಾಪಕರ ಜನ್ಮದಿನಾಚರಣೆ ನಿಮಿತ್ತ ಘೋಷಣೆ

IMG_20250808_165420_644-1.jpg
Published on

ಹುಬ್ಬಳ್ಳಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥಾಪಕರಾದ ಸರ್ ಸೊರಾಬ್ಜಿ ಪೋಚ್ ಖನವಾಲಾ ಅವರ 144ನೇ ಜನ್ಮದಿನವನ್ನು ಹಲವು ವಿಧಾಯಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಇಲ್ಲಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ದೊಡ್ಡ ರಂಗಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥಾಪಕರ ಜನ್ಮದಿನದ ಅಂಗವಾಗಿ ಬ್ಯಾಂಕಿನ ಗಣ್ಯ ಹಾಗೂ ಹಳೇ ಗ್ರಾಹಕರನ್ನು ಶಾಖೆಗಳಿಗೆ ಕರೆದು ವೈವಿದ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.

ಗ್ರಾಹಕರ ಸಮಾಗಮ ನಡೆಸಲಾಯಿತು. ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 45 ಶಾಖೆಗಳಿದ್ದು, ಶೀಘ್ರ ಇನ್ನೂ ಐದು ಹೊಸ ಶಾಖೆಗಳನ್ನು ಆರಂಭಿಸಲಾಗುವುದು. 1911ರಲ್ಲಿ ಸ್ಥಾಪನೆಯಾದಾಗಿನಿಂದ ವಿಶಿಷ್ಟ ಲಕ್ಷಣಗಳಾದ ಸೇವೆ, ಸಮಗ್ರತೆ ಮತ್ತು ನಾವೀನ್ಯತೆಯ ಪರಂಪರೆಯನ್ನು ಎತ್ತಿ ಹಿಡಿಯುತ್ತ ಬರಲಾಗಿದೆ ಎಂದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ಶ್ರೇಷ್ಠತೆಯನ್ನು ತರಲು ಶ್ರಮಿಸಲಾಗುತ್ತಿದೆ. ಸಮುದಾಯ ಮತ್ತು ರಾಷ್ಟ್ರದ ಪ್ರಗತಿಗೆ ಸಕಾರಾತ್ಮಕ ಕೊಡುಗೆ ನೀಡುವ ಪ್ರತಿಜ್ಞೆ ಮಾಡಲಾಗಿದೆ ಎಂದರು.

ದೇಶದ ಅತ್ಯಂತ ಹಳೆಯ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಭಾರತದಾದ್ಯಂತ 4,500ಕ್ಕೂ ಹೆಚ್ಚು ಶಾಖೆಗಳು ಮತ್ತು 21 ಸಾವಿರಕ್ಕೂ ಅಧಿಕ ಗ್ರಾಹಕ ಸಂಪರ್ಕ ಕೇಂದ್ರಗಳನ್ನು ಹೊಂದಿದೆ. ಕಳೆದ ಮಾರ್ಚ್ ವೇಳೆಗೆ ಬ್ಯಾಂಕ್‌ನ ಒಟ್ಟು ವ್ಯವಹಾರ 7 ಲಕ್ಷ ಕೋಟಿ ರೂ. ದಾಟಿದೆ. 2026ರ ಮಾರ್ಚ್ ವೇಳೆಗೆ 8 ಲಕ್ಷ ಕೋಟಿ ರೂ. ಮೀರುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಮುದ್ರಾ ಯೋಜನೆ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಾಗುತ್ತಿದೆ. ಮಹಿಳೆಯರಿಗೆ ವಿಶೇಷ ವಿಮಾ ಯೋಜನೆ ಪರಿಚಯಿಸಲಾಗಿದೆ. ಸಿಎಸ್ಆರ್ ಅಡಿಯಲ್ಲಿ ಶಾಲೆ, ಕಾಲೇಜುಗಳಿಗೆ ಅಗತ್ಯ ಸಲಕರಣೆ ಒದಗಿಸಲಾಗಿದೆ ಎಂದರು.
ಮುಖ್ಯ ವ್ಯವಸ್ಥಾಪಕ ಮುದಿತ್ ಮಾಂಗಲಿಕ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net