ಸೆಂಟ್ರಲ್ ಬ್ಯಾಂಕ್‌ನಲ್ಲಿ ಸಿಗದ ಸಮರ್ಪಕ ಸೇವೆ

PROTEST
Published on

ನರೇಗಲ್ಲ: ಪಟ್ಟಣದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯು ನರೇಗಲ್ಲ ಮತ್ತು ಸುತ್ತಲಿನ ಗ್ರಾಹಕರಿಗೆ ಸಮರ್ಪಕ ಸೇವೆಯನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ನರೇಗಲ್ಲ ಹಿತರಕ್ಷಣಾ ಸಮಿತಿ, ಭಾರತೀಯ ಕಿಸಾನ್ ಸಂಘದವರ ಆಶ್ರಯದಲ್ಲಿ ಗ್ರಾಹಕರು ಮಂಗಳವಾರ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಭಾರತೀಯ ಕಿಸಾನ ಸಂಘದ ಸದಸ್ಯ ರಾಜಶೇಖರ ವಂಕಲಕುಂಟಿ ಮಾತನಾಡಿ, ಸಿಬ್ಬಂದಿಯ ಅಸಹಕಾರ ಕಂಡು ರೋಸಿಹೋಗಿ ಪ್ರತಿಭಟನೆಗೆ ಮುಂದಾಗಿದ್ದೇವೆ. ಗ್ರಾಹಕರು ಏನೇ ಕೇಳಿದರೂ ಇಲ್ಲ ಎನ್ನುವ ಸಿದ್ಧ ಉತ್ತರ ಸಿಬ್ಬಂದಿಯಿಂದ ಬರುತ್ತದೆ. ಇದಕ್ಕೆ ಕಾರಣ ಇಲ್ಲಿರುವ ಸಿಬ್ಬಂದಿಯ ಕೊರತೆ. ಈಗ ಬ್ಯಾಂಕಿನಲ್ಲಿ ಇಬ್ಬರೇ ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಾಖೆಯಲ್ಲಿ ಒಬ್ಬ ಮ್ಯಾನೇಜರ್, ಒಬ್ಬ ಫೀಲ್ಡ್ ಆಫೀಸರ್, ಒಬ್ಬ ಕ್ಯಾಶಿಯರ್ ಮತ್ತು ಮೂವರು ಕ್ಲರ್ಕ್ ಇರಬೇಕು. ಆದರೆ ಈಗ ಇರುವುದು ಕೇವಲ ಇಬ್ಬರು. ಹೀಗಾಗಿ ಅವರಿಂದ ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದರು.

ನಾಗರಿಕ ಹಿತರಕ್ಷಣಾ ಸಮಿತಿಯ ಶಿವನಗೌಡ ಪಾಟೀಲ ಮಾತನಾಡಿ, ಬ್ಯಾಂಕ್ ಸಿಬ್ಬಂದಿಯ ಕೊರತೆಯನ್ನು ತಕ್ಷಣವೆ ನೀಗಿಸಿ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಕೊಡಬೇಕು. ಪಾಸ್‌ಬುಕ್ ಪ್ರಿಂಟರ್ ಸಮಸ್ಯೆ ಎಂದಿಗೂ ಇದ್ದು, ಅದನ್ನು ಸರಿಪಡಿಸಬೇಕು. ಎಟಿಎಂ ಈ ಊರಲ್ಲಿ ಒಂದೇ ಇದ್ದು, ಅದರ ಸೇವೆಯನ್ನು 24 ತಾಸು ನೀಡಬೇಕು. ಯಾವಾಗಲೂ ಎಟಿಎಂನಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು ಎಂದರು.
ವಿಭಾಗೀಯ ಕಚೇರಿಯ ಹಿರಿಯ ಅಧಿಕಾರಿ ರಾಜಶೇಖರ ಮಾತನಾಡಿ, 12 ದಿನಗಳವರೆಗೆ ಕಾಲಾವಶಕಾ ನೀಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಲಿಖಿತವಾಗಿ ಭರವಸೆ ನೀಡಿದರು ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಹುಬ್ಬಳ್ಳಿಯ ವಿಭಾಗೀಯ ಕಚೇರಿಯ ಹಿರಿಯ ಅಧಿಕಾರಿ ರಾಜಶೇಖರ ಮತ್ತು ವೀರೇಶ, ಜಗದೀಶ ಸಂಕನಗೌಡ್ರ, ಡಾ. ಆರ್.ಕೆ. ಗಚ್ಚಿನಮಠ, ಶಿವು ಮಾವಿನಕಾಯಿ, ಸಿದ್ದಪ್ಪ ರಾಗಿ, ಚನ್ನಬಸವ ಕುಷ್ಟಗಿ, ಶರಣಪ್ಪ ಬಳ್ಳಾರಿ, ರವಿ ಮ್ಯಾಗೇರಿ, ಬಸವರಾಜ ಒಂಕಲಕುಂಟಿ, ಕಸ್ತೂರೆವ್ವ ಕೊಂಡಿ, ಸಿದ್ದಮ್ಮ ಹಕಾರಿ, ಪಾರ್ವತೆಮ್ಮ ಕುಂಬಾರ, ದಾಕ್ಷಾಯಣಿ ಪಾರಿಗೊಂಡ, ಗಂಗಮ್ಮ ಕತ್ತಿಶೆಟ್ಟರ, ನಿರ್ಮಲಾ ಗಡ್ಡದ, ಶರಣಪ್ಪ ಕೊಂಡಿ, ಕಳಕಪ್ಪ ಹೊನವಾಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net