

ಉಡುಪಿ: ತೌಕ್ತೆ ಚಂಡಮಾರುತದಿಂದ ಮೇ 14ರಿಂದ 17ರ ನಡುವೆ ಜಿಲ್ಲೆಯಲ್ಲಿ ಒಟ್ಟು 70.17 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಹಾನಿ ಉಂಟಾದ ಪ್ರದೇಶಗಳ ಪರಿಶೀಲನೆಗೆ ಆಗಮಿಸಿದ ಕೇಂದ್ರದ ತಂಡಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಬುಧವಾರ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಅಧಿಕಾರಿಗಳು ಗುರುವಾರ ಉಡುಪಿಗೆ ಆಗಮಿಸಿದರು. ಕೇಂದ್ರ ಗೃಹ ಇಲಾಖೆ ಲೆಕ್ಕಪತ್ರ ವಿಭಾಗದ ಸುಶೀಲ್ಪಾಲ್ ನೇತೃತ್ವದ ತಂಡದಲ್ಲಿ ಹಣಕಾಸು, ಕೃಷಿ, ಹೆದ್ದಾರಿ ಇಲಾಖೆಗಳ ಅಧಿಕಾರಿಗಳು, ಇಂಜಿನಿಯರ್‌ಗಳು ಇದ್ದಾರೆ.
ತಂಡ ಬೈಂದೂರು, ಶಿರೂರು, ಉಪ್ಪುಂದ, ಮರವಂತೆಗೆ ತೆರಳಿ ಕಡಲ್ಕೊರೆತ ಹಾನಿ ವೀಕ್ಷಿಸಿದೆ. ತೆಕ್ಕಟ್ಟೆ ಪುನರ್ವಸತಿ ಕೇಂದ್ರ, ಉಡುಪಿ ತಾಲೂಕು ಪಡುಕೆರೆ, ಕಾಪು ಕೈಪುಂಜಾಲು, ಲೈಟ್‌ಹೌಸ್, ಪಡುಬಿದ್ರಿ ಬ್ಲೂಫ್ಲಾೃಗ್ ಬೀಚ್‌ಗೆ ಭೇಟಿ ನೀಡಿ ಪರಿಶೀಲಿಸಿದೆ.
ಎಡಿಸಿ ಸದಾಶಿವ ಪ್ರಭು, ಸಹಾಯಕ ಆಯುಕ್ತ ರಾಜು ತಂಡದ ಜತೆಗಿದ್ದರು. ಕೇಂದ್ರ ತಂಡದಲ್ಲಿ ಅಧಿಕಾರಿಗಳಾದ ಸದಾನಂದ ಬಾಬು, ಓಂ ಕಿಶೋರ್, ಡಾ.ಪೊನ್ನು ಸ್ವಾಮಿ, ಡಾ.ಶ್ರೀನಿವಾಸ ರೆಡ್ಡಿ, ಮಹೇಶ ಕುಮಾರ ಇದ್ದರು. ತಂಡವು ಹಾನಿ ಸಂಭವಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.
ಜಿಲ್ಲೆಯಲ್ಲಿ 8 ಮನೆಗಳು ಸಂಪೂರ್ಣ, 158 ಮನೆಗಳು ಭಾಗಶಃ ಹಾನಿಯಾಗಿವೆ. 5 ಜಾನುವಾರು ಹಾಗೂ ಒಬ್ಬರು ಮೃತಪಟ್ಟಿದ್ದಾರೆ. 33 ಬೋಟ್‌ಗಳು, 14 ದೊಡ್ಡ ಬಲೆಗಳು 32 ಹೆಕ್ಟೇರ್ ಕೃಷಿ ಭೂಮಿ, ಸಮುದ್ರ ಕೊರೆತದಿಂದ 5.271 ಕಿ.ಮೀ.ಪ್ರದೇಶ, 18 ಸರ್ಕಾರಿ ಕಟ್ಟಡಗಳು, 39 ಸೇತುವೆಗಳು ಸೇರಿದಂತೆ ಒಟ್ಟು 70.17 ಕೋಟಿ ರೂ. ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೂ ್ಲಫ್ಲ್ಯಾಗ್ ಬೀಚ್ ನವೀಕರಣ 50 ಲಕ್ಷ ರೂ. ಪ್ರಸ್ತಾವನೆ ಸಲ್ಲಿಕೆ: ಪಡುಬಿದ್ರಿ: ಚಂಡಮಾರುತದಿಂದ ಹಾನಿಗೊಳಗಾಗಿರುವ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಹೊಂದಿರುವ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ನವೀಕರಣಗಳಿಗೆ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ 50 ಲಕ್ಷ ರೂ. ಪ್ರಸ್ತಾವನೆಯನ್ನು ರವಾನಿಸಲಾಗಿದೆ. ಅದನ್ನು ಬಳಸಿಕೊಂಡು ಈ ಪ್ರದೇಶವನ್ನು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಲ್ಲಿ ಮತ್ತೆ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಕಾಪು ಲೈಟ್‌ಹೌಸ್, ಕೈಪುಂಜಾಲ್, ಪಡುಬಿದ್ರಿ ನಡಿಪಟ್ಣ ಹಾಗೂ ಬ್ಲೂ ಫ್ಲ್ಯಾಗ್ ಬೀಚ್‌ಗೆ ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಮನೋಜ್, ಕರಾವಳಿ ಪ್ರದೇಶಕ್ಕೆ ಸುಮಾರು 209 ಕೋಟಿ ರೂ. ಆಸ್ತಿ ಹಾಗೂ 10.69 ಕೋಟಿ ರೂ.ಗಳ ಸೊತ್ತು ನಷ್ಟವಾಗಿರುವ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಕೇಂದ್ರದ ವೀಕ್ಷಕರ ತಂಡದ ವರದಿಯನ್ನು ಆಧರಿಸಿ ಪರಿಹಾರ ಸಿಗಲಿದೆ ಎಂದರು.
ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಕಾಪು ತಹಸೀಲ್ದಾರ್ ಪ್ರತಿಭಾ ಆರ್, ಎಎಸ್ಪಿ ಕುಮಾರಚಂದ್ರ, ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಗ್ರಾಮ ಲೆಕ್ಕಿಗ ಶ್ಯಾಮ್‌ಸುಂದರ್, ಗ್ರಾಮ ಸಹಾಯಕ ಜಯರಾಮ್, ಕರಾವಳಿ ಕಾವಲು ಪೊಲೀಸ್ ಠಾಣೆ ಎಎಸ್‌ಐ ಪ್ರದೀಪ್ ಮತ್ತಿತರರು ಇದ್ದರು.
ಮರವಂತೆಯಲ್ಲಿ ಹಾನಿ ಪ್ರದೇಶ ವೀಕ್ಷಣೆ
ಗಂಗೊಳ್ಳಿ: ಚಂಡಮಾರುತದಿಂದ ಹಾನಿಗೊಳಗಾದ ಬೈಂದೂರು ತಾಲೂಕಿನ ಮರವಂತೆ ಪ್ರದೇಶಕ್ಕೆ ಕೇಂದ್ರ ತಂಡ ಗುರುವಾರ ಭೇಟಿ ನೀಡಿತು. ಹಾನಿಗೊಳಗಾದ ಸಮುದ್ರ ತೀರ, ಕೃಷಿ ಭೂಮಿ, ರಸ್ತೆ, ಬಿದ್ದ ಮನೆಗಳನ್ನು ವೀಕ್ಷಿಸಿ ಸ್ಥಳೀಯ ಅಧಿಕಾರಿಗಳಿಂದ ಮತ್ತು ಸಂತ್ರಸ್ತರಿಂದ ಕೇಂದ್ರದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ಮರವಂತೆಯಲ್ಲಿ ಕಡಿದು ಹೋದ ಕರಾವಳಿ ರಸ್ತೆ ಪರಿಶೀಲಿಸಿದ ರಾಜ್ಯ ವಿಕೋಪ ನಿರ್ವಹಣಾ ಆಯುಕ್ತ ಡಾ. ಮನೋಜ್, ಪ್ರಕೃತಿ ವಿಕೋಪಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮುದಾಯದ ಜನರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ. ಕಳೆದ ವರ್ಷ ಅಂತಹ 912 ಸಮಿತಿ ರಚಿಸಿದ್ದು, ಈ ವರ್ಷ 1300 ಸಮಿತಿ ರಚಿಸಲಾಗುತ್ತಿದೆ. ಇವುಗಳಿಗೆ ರಕ್ಷಣೆ ಮತ್ತು ಮರುನಿರ್ಮಾಣದ ಹೊಣೆ ನೀಡಲಾಗುವುದು. ಕೃಷಿ ಹಾನಿ ಸಂಭವಿಸುವ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗಳ ಬಗೆಗೆ ಚಿಂತನೆ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ ಆಗಿರುವ ಹಾನಿಯ ಬಗ್ಗೆೆ ಇಲಾಖಾವಾರು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ. ಕೇಂದ್ರದ ಅನುದಾನ ಮಂಜೂರಾದ ಬಳಿಕ ಇಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮ್ಮೀ, ಇತರ ಅಧಿಕಾರಿಗಳು ಇದ್ದರು.