ಗಡಿ ಪರಿಷ್ಕರಣೆಗೆ ಕೇಂದ್ರದ ಸಹಕಾರ: ಬಿವೈಆರ್

byr
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
Published on

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿ ಮರುನಿಗದಿ ಮಾಡುವ ಮೂಲಕ ಶರಾವತಿ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವ ಸಂಬಂಧ ಸಹಕಾರ ನೀಡಬೇಕೆಂದು 2022ರಲ್ಲಿ ನಾನು ಅಂದಿನ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ನೀಡಿದ್ದೆ. ಅವರ ಸಹಕಾರದಿಂದ ಈಗ ಅಭಯಾರಣ್ಯದ ಗಡಿ ಪರಿಷ್ಕರಣೆ ಪ್ರಸ್ತಾವನೆಗೆ ಅಂತಿಮ ರೂಪ ಬಂದಂತಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಕೇಂದ್ರ ವನ್ಯಜೀವಿ ಮಂಡಳಿ ಸಹಕಾರ ನೀಡಿದ ಪರಿಣಾಮ ಈಗ ರಾಜ್ಯ ಸರ್ಕಾರ ಗಡಿ ಪರಿಷ್ಕರಣೆಗೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇದರಿಂದ ಕಂದಾಯ ಹಾಗೂ ಅರಣ್ಯ ಭೂಮಿ ತೊಡಕು ತಪ್ಪಿದಂತಾಗಿದೆ ಎಂದು ಹೇಳಿದ್ದಾರೆ.

ಶೆಟ್ಟಿಹಳ್ಳಿ ಅಭಯಾರಣ್ಯವನ್ನು ಅವೈಜ್ಞಾನಿಕವಾಗಿ ಘೋಷಣೆ ಮಾಡಿರುವುದರಿಂದ ಆಗಿರುವ ಸಮಸ್ಯೆಗಳನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿತ್ತು. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಕೆಲ ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿತ್ತು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶರಾವತಿ ಸಂತ್ರಸ್ತರ ಭೂಮಿ ಹಂಚಿಕೆಯಲ್ಲಿ ಉಂಟಾಗಿದ್ದ ದೊಡ್ಡ ತೊಡಕು ನಿವಾರಣೆಯಾಗಿದೆ. ಅವರಿಗೆ ಗುರುತಿಸಿದ್ದ ಭೂಮಿಯನ್ನು ವನ್ಯಜೀವಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಮುಖ್ಯವಾಗಿ ಜನವಸತಿ ಪ್ರದೇಶಗಳನ್ನು ಅಧಿಸೂಚನೆಯಿಂದ ಕೈ ಬಿಟ್ಟಿರುವುದರಿಂದ ಬಹಳಷ್ಟು ಮಂದಿಗೆ ಅನುಕೂಲವಾಗಿದೆ.

ಈ ಹಿಂದೆ ವನ್ಯಜೀವಿ ವಲಯದೊಳಗೆ ಸೇರಿಕೊಂಡಿದ್ದ ಖಾಸಗಿ ಭೂಮಿ ಅಭಿವೃದ್ಧಿಗೆ ಸಾಧ್ಯವಾಗಲಿದೆ. ಬಫರ್‌ಜೋನ್ ಪ್ರದೇಶಕ್ಕೆ ಸೇರಿದ್ದ ಶಿವಮೊಗ್ಗ ನಗರದ ಕೆಲ ಪ್ರದೇಶಗಳು ಈಗ ಅಧಿಸೂಚನೆಯಿಂದ ಹೊರಗುಳಿಯಲಿವೆ. ಇದರಿಂದ ನಗರದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net