ಸೆಂಟ್ರಿಂಗ್ ಮೇಸ್ತ್ರಿ ಸಂಶಯಾಸ್ಪದ ಸಾವು

Centering Macy's suspicious death
ಅಮಜದ್‌ಹುಸೇನ್
Published on

ಮುದ್ದೇಬಿಹಾಳ : ಕಟ್ಟಡದ ಸೆಂಟ್ರಿಂಗ್ ಮೇಸ್ತ್ರಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಆಶ್ರಯ ಮನೆಯ ಕೊಠಡಿಯೊಂದರಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ವಿಜಯಪುರ ಮೂಲದ ಅಮಜದ್‌ಹುಸೇನ್ ಹಾಜಿಸಾಬ್ ವಾಲೀಕಾರ (51) ಸಾವನ್ನಪ್ಪಿದ ಕಟ್ಟಡ ಕಾರ್ಮಿಕ.

ಡಿವೈಎಸ್ಪಿ ಕರುಣಾಕರ ಶೆಟ್ಟಿ, ಪಿಎಸ್‌ಐ ಆರೀಫ್ ಮುಶಾಪುರಿ, ವಿಜಯಪುರ ಅಪರಾಧ ವಿಭಾಗ ತಜ್ಞರಾದ ಪವನ್ ಬಾನೆ, ಶಿವರಾಜ ಮುಡಸಿ, ಕಾವ್ಯಾ ಹುಣಸಿಮರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ವ್ಯಕ್ತಿಯ ಕಿವಿ, ಮೂಗಿನಿಂದ ರಕ್ತ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಈ ಕುರಿತು ಮೃತ ಕಾರ್ಮಿಕನ ಪುತ್ರ ಸೂಹೈಲ್ ವಾಲೀಕಾರ ತಮ್ಮ ತಂದೆ ಸಾವಿನಲ್ಲಿ ಸಂಶಯವಿದ್ದು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಅವರ ಶವವನ್ನು ಮುದ್ದೇಬಿಹಾಳ ಸರಕಾರಿ ಆಸ್ಪತ್ರೆಯಿಂದ ವಿಜಯಪುರಕ್ಕೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸರ್ಕಾರದಿಂದ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ವಿಜಯಪುರ ಮೂಲದ ಜಿ.ಕೆ. ಜೋಗೂರ ಕನ್‌ಸ್ಟ್ರಕ್ಷನ್ ಕಂಪನಿಯಿಂದ ನಡೆಸಲಾಗುತ್ತಿದೆ.

ಆದರೆ ಕಾಮಗಾರಿ ನಡೆಸುವ ಸ್ಥಳದಲ್ಲಿ ಕಾನೂನುಬದ್ಧವಾಗಿ ಕಾರ್ಮಿಕರಿಗೆ ಇರಬೇಕಾದ ಸುರಕ್ಷಿತವಾದ ಸೌಭ್ಯಗಳು ಇಲ್ಲವೆಂಬ ಆರೋಪಗಳೂ ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net