'ವಿವಿ ಸ್ಥಾಪನೆಗೆ ಕೇಂದ್ರಕ್ಕೆ ಒತ್ತಡ ಅಗತ್ಯ'

Center needs pressure to establish university
Published on

ಮಡಿಕೇರಿ:

ಕೊಡಗಿನ ಜನರ ಬಹುಕಾಲದ ಬೇಡಿಕೆಯಾಗಿರುವ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದ್ದು ಆ ಮೂಲಕ ಕ್ರೀಡಾಸಕ್ತರ ಬೆಡಿಕೆ ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಮುಕ್ಕಾಟಿರ ತಿಮ್ಮಯ್ಯ ನಾಣಯ್ಯ ತಿಳಿಸಿದರು. ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ "ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್" ಕ್ರಿಕೆಟ್ ಪಂದ್ಯಾವಳಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದ ಅವರು, ಸಣ್ಣ ಜಿಲ್ಲೆಯಾಗಿರುವ ಕೊಡಗನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಇಡೀ ಪ್ರಪಂಚಕ್ಕೆ ತಿಳಿಯುವಂತೆ ಮಾಡಿದ್ದಾರೆ. ಇದೀಗ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಯುವ ಪ್ರತಿಭೆಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಸೈನಿಕರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಕೊಡಗು ಜಿಲ್ಲೆಯದ್ದಾಗಿದೆ ಎಂದರು.

ಕೊಡವ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕಳೆದ ೨೪ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡಿದೆ. ಹಾಕಿಹಬ್ಬ ಹೊಸ ದಾಖಲೆ ಬರೆದಿರುವುದು ಹೆಮ್ಮೆಯ ವಿಚಾರವಾಗಿದೆ. ದೇಶ ಸೇವೆಯ ಮನೋಭಾವ ಹೊಂದಿರುವ ಕೊಡವ ಜನಾಂಗ ಶಿಸ್ತಿಗೆ ಹೆಸರುವಾಸಿಯಾಗಿದೆ. ಕ್ರೀಡಾಜಿಲ್ಲೆ ಕೊಡಗಿನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದು, ರಾಷ್ಟ್ರ ಮಟ್ಟಕ್ಕೆ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡುವ ಉದ್ದೇಶ ಹೊಂದಿರುವುದು ಶ್ಲಾಘನೀಯವೆಂದರು.

ಕೂರ್ಗ್ ಕ್ರಿಕೆಟ್ ಫೌಂಡೇಶನ್ ಹಿರಿಯ ಸಲಹೆಗಾರ ಕಿಶನ್ ಮಾದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು. ಕರ್ನಾಟಕ ತಂಡದಲ್ಲೂ ಕೊಡಗಿನ ಪ್ರತಿಭೆಗಳು ಗುರುತಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರ್ಕೊಂಡ ಸುನಿಲ್, ಪ್ರಮುಖರಾದ ಕೊಕ್ಕಲೆರ ಅಪ್ಪಯ್ಯ, ಪಂದ್ಯಾವಳಿಯ ನಿರ್ದೇಶಕರು ಹಾಗೂ ಫ್ರಾಂಚೈಸಿಗಳ ನಾಯಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಕೂರ್ಗ್ ಬ್ಲಾಸ್ಟರ್ಸ್ ಮತ್ತು ಕೂರ್ಗ್ ಕೊಡವ ಟ್ರೈಬ್ಸ್ ನಡುವೆ ಮೊದಲ ಪಂದ್ಯಾವಳಿ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net