ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಮಧ್ಯೆ ಪ್ರವೇಶಿಸಲಿ: ಉಗ್ರಪ್ಪ ಆಗ್ರಹ

WhatsApp Image 2023-09-23 at 11.33.21 AM
Published on

ಹೊಸಪೇಟೆ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಕಾವೇರಿ ನದಿ ಪಾತ್ರದ ನಾಲ್ಕು ರಾಜ್ಯಗಳ ಸಭೆ ಕರೆದು, ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಕಾವೇರಿ ನದಿ ಹರಿಯುತ್ತದೆ. ಕಾವೇರಿ ನದಿ ನೀರು ನಿರ್ವಹಣೆಗೆ ಸಂಬAಧಿಸಿ ಎರಡು ಪ್ರತ್ಯೇಕ ಸಮಿತಿಗಳಿದ್ದರೂ, ಕೇಂದ್ರ ಸರ್ಕಾರದ ನಾಮನಿರ್ದೇಶಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದ್ಯ, ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲ ಆವರಿಸಿದೆ. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರಿನಲ್ಲಿ ಬೆಂಗಳೂರು ಸೇರಿದಂತೆ ನದಿ ಪಾತ್ರ ನಗರಗಳಿಗೆ ಕುಡಿಯಲು ನೀರು ಒದಗಿಸಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಬೇಕು ಎಂಬುದು ಅವೈಜ್ಞಾನಿಕವಾಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆದರೆ, `ನೀರೆಲ್ಲ ತಮಿಳುನಾಡಿಗೆ ಬಿಟ್ಟು, ಈಗ ನಮ್ಮಲ್ಲಿ ಬಂದರೆ ಏನು ಮಾಡಬೇಕು' ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಉಡಾಫೆಯ ಮಾತುಗಳನ್ನಾಡಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ದಸರಾ ಉತ್ಸವಕ್ಕೆ ಹಂಪಿಯೇ ತಾಯಿ ಬೇರು. ಹೀಗಾಗಿ ಹಂಪಿ ಉತ್ಸವವನ್ನು ಕಡೆಗಣಿಸುವುದು ಸರಿಯಲ್ಲ. ಮೈಸೂರು ದಸರಾ ಮಾದರಿಯಲ್ಲಿ ಹಂಪಿ ಉತ್ಸವವನ್ನೂ ಸರಳವಾಗಿ ಒಂದು ದಿನದ ಮಟ್ಟಿಗೆಯಾದರೂ ಆಚರಿಸಬೇಕು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಐತಿಹಾಸಿಕ ಹಂಪಿಯಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಕೋರ್ಟ್ ಆದೇಶದ ನೆಪವೊಡ್ಡಿ ಹೋಂ ಸ್ಟೇ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿರುವುದು ಸರಿಯಲ್ಲ. ೧೯೭೦ ರಿಂದೀಚೆಗೆ ಹಂಪಿಯಲ್ಲಿ ಗುರುತರವಾಗ ಕಾನೂನು ಬಾಹಿರ ಚಟುವಟಿಕೆಗಳು ನಡೆದಿರುವ ಬಗ್ಗೆ ವರದಿಯಿಲ್ಲ. ಅಂತಹ ಕೃತ್ಯಗಳು ಕಂಡು ಬಂದರೂ, ಅದನ್ನು ತಡೆವುದು ಪೊಲೀಸ್ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಎಎಸ್‌ಐ ಕೆಲಸ. ಆಯಾ ಸಂಸ್ಥೆಗಳನ್ನು ಹೊಣೆ ಮಾಡದೇ, ಜನರ ದುಡಿಮೆಯನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಂಪಿಯಲ್ಲಿ ಕುಡಿಯಲು ಕೂಲ್‌ಡ್ರಿಂಕ್ಸ್ ಸಿಗುತ್ತಿಲ್ಲ. ಊಟ, ಉಪಹಾರ ಸಿಗುತ್ತಿಲ್ಲ. ದೇಶ- ವಿದೇಶಗಳಿಮದ ಬರುವ ಪ್ರವಾಸಿಗರು ಹೊಸಪೇಟೆಗೆ ಬರಬೇಕೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಈ ಕುರಿತಂತೆ ಹಂಪಿ ಸ್ಥಿತಿಯ ನೈಜತೆಯನ್ನು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟು, ಸ್ಥಳೀಯರಿಗೆ ನ್ಯಾಯ ದೊರೆಯುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರ ಎಂ.ಎಸ್.ದಿವಾಕರ್‌ಗೆ ಸಲಹೆ ನೀಡಿದ್ದಾಗಿ ಇದೇ ವೇಳೆ ತಿಳಿಸಿದರು.

ಹಂಪಿ, ಅಂಜನಾದ್ರಿ, ನವವೃಂದಾವನ, ಹುಲಗಿ, ಸಂಡೂರು ಕುಮಾರಸ್ವಾಮಿ, ಗಾಣಗಟ್ಟಿ ಮಾಯಮ್ಮ, ಮೈಲಾರ, ಕಂಪ್ಲಿ ಕುಮಾರರಾಮನ ಕೋಟೆ, ಧರೋಜಿ ಕರಡಿಧಾಮ, ಕುರುಗೋಡಿನ ದೊಡ್ಡ ಬಸವಣ್ಣ ಒಳಗೊಂಡAತೆ ಸ್ಥಳೀಯ ಪ್ರವಾಸಿ ಸರ್ಕ್ಯೂಟ್ ರೂಪಿಸಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ವಿಚಾರವಾಗಿ ನಾಲ್ಕು ರಾಜ್ಯಗಳ ಸಭೆ ಕರೆಯುವಂತೆ ಒತ್ತಾಯಿಸಿ ಪ್ರಧಾನಿ, ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದೇನೆ. ಹೂಳಿನ ವಿಚಾರವಾಗಿ ತುಂಗಭದ್ರಾ ಮಂಡಳಿಯ ಅಭಿಯಂತರರ ನಿಲುವೇನು ಎಂಬುದನ್ನೂ ಪ್ರಶ್ನಿಸಿದ್ದೇನೆ. ಅದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ನಗರಸಭೆ ಸದಸ್ಯ ಕೆ.ಮಹೇಶ, ನಿಂಬಗಲ್ ರಾಮಕೃಷ್ಣ ಇದ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬ ಚರ್ಚೆ ಸದ್ಯಕ್ಕೆ ಅಪ್ರಸ್ತುತ. ಮೂರು ಉಪ ಮುಖ್ಯಮಂತ್ರಿ ಬೇಡಿಕೆಗೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ರಾಜ್ಯದಲ್ಲಿ ಬಿಜೆಪಿ ಅಸಮರ್ಥವಾಗಿದ್ದರಿಂದ ಜೆಡಿಎಸ್ ನೊಂದಿಗೆ ಕೂಡಿಕೊಂಡಿದೆ. ಅವರು ಮೊದಲಿನಿಂದಲೂ ಒಳಗೊಳಗೆ ದೋಸ್ತಿ ಇತ್ತು, ಈಗ ಅದು ಬಹಿರಂಗವಾಗಿದೆ. ಅಲ್ಲದೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ. - ವಿ.ಎಸ್.ಉಗ್ರಪ್ಪ, ಮಾಜಿ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net