

ಬೆಂಗಳೂರು: ಒಂದೆಡೆ ಲಕ್ಷಾಂತರ ನಾಗರಿಕರು ಕೈಗೆಟುಕುವ ದರದಲ್ಲಿ ಮನೆ ಖರೀದಿಸಲು ಯೋಚಿಸುತ್ತಿದ್ದರೆ ಇನ್ನೊಂದೆಡೆ, ಆರಂಭಿಸಿದ ವಸತಿ ಯೋಜನೆಗಳನ್ನು ಮುಕ್ತಾಯಗೊಳಿಸಲಾಗದೆ ಸ್ಥಗಿತಗೊಳಿಸಿರುವ ರಿಯಲ್ ಎಸ್ಟೇಟ್ ಕಂಪನಿಗಳು.
ಹಣಕಾಸು ಮುಗ್ಗಟ್ಟು, ಕರೊನಾ ಸೇರಿದಂತೆ ಅನೇಕ ವಿಚಾರಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರ ‘ಸ್ವಾಮಿ’ (ಸ್ಪೆಷಲ್ ವಿಂಡೋ ಫಾರ್ ಅಫೋರ್ಡೆಬಲ್ ಆಂಡ್ ಮಿಡ್ ಇನ್ಕಂ ಹೌಸಿಂಗ್- SWAMIH) ನಿಧಿಯನ್ನು ಸ್ಥಾಪಿಸಿದೆ.
ಬೇಡಿಕೆ ಹಾಗೂ ಪೂರೈಕೆಯ ನಡುವಿನ ಈ ಅಂತರವನ್ನು ಕಡಿಮೆ ಗೊಳಿಸಿ ರಿಯಲ್ ಎಸ್ಟೇಟ್ ಕಂಪನಿಗಳು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲ ಕಲ್ಪಿಸಲು ಯೋಜನೆ ಆರಂಭಿಸಿದೆ. ಯೋಜನೆಗೆ ಚಾಲನೆ ನೀಡಿದಾಗಿನಿಂದ ದೇಶದಲ್ಲಿ ಈ ಸಹಾಯಕ್ಕೆ ಆಯ್ಕೆಯಾದ ಮೊದಲ ಯೋಜನೆ ಬೆಂಗಳೂರಿನದ್ದು.
ಸ್ಥಗಿತವಾದ ಯೋಜನೆಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದಾದರೂ ಐಷಾರಾಮಿ ವಸತಿ ಯೋಜನೆಗಳಿಗೆ ನೆರವು ಸಿಗುವುದಿಲ್ಲ. ಮುಖ್ಯವಾಗಿ, ಕಡಿಮೆ ದರದ ಮನೆಗಳು ಹಾಗೂ ಮಧ್ಯಮ ಆದಾಯದ ಕುಟುಂಬಗಳು ಖರೀದಿಸಬಲ್ಲ ಯೋಜನೆಗಳಿಗೆ ಮಾತ್ರ ಕೇಂದ್ರ ಸರ್ಕಾರದ ನೆರವು ಸಿಗುತ್ತದೆ. ಹಣಕಾಸು ಸಚಿವಾಲಯ ಈ ನಿಧಿಯನ್ನು ಪ್ರಾಯೋಜಿಸಿದ್ದು, ಎಸ್ಬಿಐ ಕ್ಯಾಪ್ ವೆಂಚರ್ಸ್ ಸಂಸ್ಥೆ ಇದರ ನಿರ್ವಹಣೆ ಮಾಡುತ್ತಿದೆ. ಅರ್ಧಕ್ಕೆ ಸ್ಥಗಿತವಾಗಿರುವ, ಬ್ರೌನ್ಫೀಲ್ಡ್, ರೇರಾ ನೋಂದಾಯಿತ, ಆಸ್ತಿ ಮೌಲ್ಯವೂ ಉತ್ತಮವಾಗಿರುವ, ಅಂತಿಮ ಹಂತದ ಹಣಕಾಸಿನ ನೆರವು ಅಗತ್ಯವಿರುವ ಯೋಜನೆಗಳಿಗೆ ಮಾತ್ರ ಈ ನೆರವು ಲಭಿಸುತ್ತದೆ. ಯೋಜನೆಗೆ ಕೇಂದ್ರ ಸರ್ಕಾರ ಮೊದಲು 12,500 ಕೋಟಿ ರೂ. ಮೀಸಲಿಟ್ಟಿತ್ತು. ನಂತರದಲ್ಲಿ ಬೇಡಿಕೆ ಹಾಗೂ ಈ ನಿಧಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ 25 ಸಾವಿರ ಕೋಟಿ ರೂ.ಗೆ ಮೊತ್ತ ಹೆಚ್ಚಿಸಲಾಯಿತು.
ಯೋಜನೆಯಲ್ಲಿ ಮೊದಲ ಹಂತದ ನೆರವಾಗಿ ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ, 60 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಳಿಸಲು 8,700 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿತು. ಬೃಹತ್ ನಗರಗಳಾದ ದೆಹಲಿ ಎನ್ಸಿಆರ್, ಮುಂಬೈ, ಬೆಂಗಳೂರು, ಚೆನ್ನೈ, ಪುಣೆ, ಎರಡನೇ ಪ್ರಮುಖ ನಗರಗಳಾದ ಕರ್ನಾಲ್, ಪಾಣಿಪತ್, ಲಖನೌ, ಸೂರತ್, ಡೆಹ್ರಾಡೂನ್, ಕೋಟ, ನಾಗಪುರ, ಕೈಪುರ, ನಾಸಿಕ್, ವಿಶಾಖಪಟ್ಟಣ, ಚಂಡೀಗಢ ಮುಂತಾದ ಪ್ರದೇಶಗಳ 81 ವಸತಿ ಯೋಜನೆಗಳಲ್ಲಿ ಈ ಮನೆಗಳಿದ್ದು, ಅಂತಿಮ ಹಂತದ ಹಣದ ಕೊರತೆಯಾಗಿ ಸ್ಥಗಿತವಾಗಿದ್ದವು. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಕ್ಟೋಬರ್ 5ಕ್ಕೆ ತಿಳಿಸಿದಂತೆ, 33 ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಅಂತಿಮ ಒಪ್ಪಿಗೆ ನೀಡಲಾಗಿದೆ. 4,197 ಕೋಟಿ ರೂ. ಹೂಡಿಕೆಯಿಂದಾಗಿ 25,048 ಮನೆಗಳ ನಿರ್ಮಾಣ ಮುಕ್ತಾಯವಾಗುತ್ತವೆ. ಅಂತಿಮ ಒಪ್ಪಿಗೆ ಪಡೆದ 33 ಸೇರಿ ಇಲ್ಲಿವರೆಗೆ ಒಟ್ಟು 123 ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಗಳಿಗೆ 12,079 ಕೋಟಿ ರೂ. ಹೂಡಿಕೆಯಾಗಲಿದ್ದು, 81,308 ಮನೆಗಳು ಪೂರ್ಣಗೊಂಡು ಗ್ರಾಹಕರಿಗೆ ಲಭಿಸುತ್ತವೆ.
ರಿಯಲ್ ಎಸ್ಟೇಟ್ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗೆ ಒಳಪಟ್ಟಿದೆ. ರೇರಾ ನೋಂದಣಿ ಆಗಬೇಕು ಎಂಬುದು ಜತೆಗೆ ಗ್ರಾಹಕರು ಜಾಗೃತರಾಗಿದ್ದಾರೆ. ದಿನದಿಂದ ದಿನಕ್ಕೆ ನಿರ್ಮಾಣ ಕ್ಷೇತ್ರದ ಕಚ್ಚಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ವಿಶ್ವವನ್ನೇ ಕಾಡುತ್ತಿರುವ ಆರ್ಥಿಕ ಸಂಕಷ್ಟದಿಂದಾಗಿ ಅನೇಕ ಸಂಸ್ಥೆಗಳ ಆರ್ಥಿಕ ಮೂಲಕ್ಕೆ ಧಕ್ಕೆಯಾಗಿದ್ದು, ಯೋಜನೆಗಳು ಅರ್ಧಕ್ಕೆ ಸ್ಥಗಿತವಾಗಿವೆ. ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಮಾಣ ಸಂಸ್ಥೆಗಳ ಬಳಿ ಹಣವಿಲ್ಲ, ಪೂರ್ಣವಾಗದ ಹಾಗೂ ಅರ್ಧಕ್ಕೆ ಸ್ಥಗಿತವಾದ ಯೋಜನೆಗಳತ್ತ ಗ್ರಾಹಕರು ಆಸಕ್ತಿ ತೋರುತ್ತಿಲ್ಲ. ಒಂದು ಅಂದಾಜಿನ ಪ್ರಕಾರ, ಈ ರೀತಿ ಸ್ಥಗಿತಗೊಂಡ ಯೋಜನೆಗಳಲ್ಲಿ ಒಟ್ಟು 4.58 ಲಕ್ಷ ಮನೆಗಳಿವೆ. ಈ ಯೋಜನೆಗಳನ್ನು ಪೂರ್ಣಗೊಳಿಸಿ ಗ್ರಾಹಕರಿಗೆ ಒದಗಿಸಲು 55 ಸಾವಿರ ಕೋಟಿ ರೂ. ಅಗತ್ಯವಿದೆ. ಯೋಜನೆಯ ಮುಕ್ತಾಯಕ್ಕೆ ಹಣಕಾಸಿನ ನೆರವು ನೀಡಲು ಕೇಂದ್ರ ಸರ್ಕಾರ ಕಳೆದ ವರ್ಷ ನಿರ್ಧರಿಸಿತ್ತು. ಈ ಕುರಿತ ಪ್ರಸ್ತಾವನೆಯನ್ನು ಸಂಪುಟ ಸಭೆ 2019ರ ನ.6ಕ್ಕೆ ಒಪ್ಪಿಗೆ ಸೂಚಿಸಿತ್ತು.
ಕನಕಪುರ ರಸ್ತೆಯಲ್ಲಿ ಆರೇಳು ವರ್ಷದ ಹಿಂದೆ ಆರಂಭವಾದ ಮಂತ್ರಿ ಸೆರೆನಿಟಿ ಯೋಜನೆಯು ಸ್ವಾಮಿ ನಿಧಿಯಲ್ಲಿ ಸರ್ಕಾರದ ಸಹಾಯಕ್ಕೆ ಆಯ್ಕೆಯಾದ ಮೊದಲ ಯೋಜನೆ. ಯೋಜನೆಯಲ್ಲಿ ಸುಮಾರು 3 ಸಾವಿರ ಮನೆಗಳಿದ್ದು, ಅಂತಿಮ ಹಂತಕ್ಕೆ ಬಂದಾಗ ಬಿಲ್ಡರ್ಗೆ ಹಣಕಾಸು ಮುಗ್ಗಟ್ಟು ಎದುರಾಗಿ ಸ್ಥಗಿತವಾಗಿತ್ತು. ಆದರೆ ಯೋಜನೆ ಮುಕ್ತಾಯವಾಗುತ್ತದೆ ಎಂದು ಬ್ಯಾಂಕ್ನಲ್ಲಿ ಸಾಲ ಮಾಡಿದ್ದ ನಾಗರಿಕರು ಇತ್ತ ಇಎಂಐ ಕಟ್ಟುತ್ತ, ಅತ್ತ ಮನೆಯೂ ಲಭಿಸದೆ ಸಂಕಷ್ಟದಲ್ಲಿದ್ದರು. ಶುಕ್ರವಾರವಷ್ಟೆ ಯೋಜನೆಗೆ ಹಣ ಲಭಿಸಿದೆ ಎಂದು ಡೆವಲಪರ್ ಸುಶೀಲ್ ಮಂತ್ರಿ ಖಚಿತಪಡಿಸಿದ್ದಾರೆ. 12-24 ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ‘ಸ್ವಾಮಿ ನಿಧಿ’ಯ ಹೂಡಿಕೆ ಅಧಿಕಾರಿ ಇರ್ಫಾನ್ ಎ ಕಾಜಿ, ಸ್ಥಗಿತವಾಗಿರುವ ಯೋಜನೆಗಳಿಗೆ ಅಂತಿಮ ಹಂತದ ಹೂಡಿಕೆ ನೀಡಲು ನಾವು ಬದ್ಧ. ಹಣಕಾಸಿನ ಅವಶ್ಯಕತೆಯಿರುವ ಯೋಜನೆಗಳಲ್ಲಿ ಇದು ಬೆಂಗಳೂರಿನ ಮೊದಲ ಪ್ರಕರಣ ಎಂದು ತಿಳಿಸಿದ್ದಾರೆ. ಹಣಕಾಸಿನ ನೆರವು ಲಭಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಮಂತ್ರಿ ಸೆರೆನಿಟಿ ಮನೆ ಖರೀದಿದಾರರ ಸಮಿತಿ ಸದಸ್ಯ ಪ್ರಭು ಶಂಕರ್, ನಮ್ಮ ಯೋಜನೆ ಅಂತಿಮ ಹಂತದಲ್ಲಿ ಸ್ಥಗಿತವಾಗಿದ್ದು ನಮ್ಮ ನಿದ್ದೆಗೆಡಿಸಿತ್ತು. ಸಂಸದ ತೇಜಸ್ವಿ ಸೂರ್ಯ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರದಿಂದ ಹಣ ಲಭಿಸಿದೆ ಎಂದಿದ್ದಾರೆ.