

ಚಿಕ್ಕಮಗಳೂರು: ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅಕ್ಕಪಕ್ಕದ ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಿ ಕಸ್ತೂರಿ ರಂಗನ್ ವರದಿ ಜಾರಿಯಿಂದಾಗುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸ್ಪಷ್ಟ ವರದಿ ನೀಡಬೇಕು ಎಂದು ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ಧಾರ್ಥ ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಪರಿಸರ, ಅರಣ್ಯ ಪ್ರದೇಶವನ್ನು ಪರಿಶೀಲಿಸಿ ಜನವಸತಿ ಇರುವ ಕಡೆ ಭೇಟಿಕೊಟ್ಟು ಇಂತಹ ಪ್ರದೇಶವನ್ನು ಹೊರಗಿಡಲಾಗಿದೆ ಎಂದು ಸ್ಪಷ್ಟ ವರದಿಯನ್ನು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಪರಿಸರ ಸಚಿವರಿಗೆ ನೀಡಬೇಕು. ಇಲ್ಲದಿದ್ದರೆ ಮುಂದೆ ಬಹಳ ಅಪಾಯವಿದೆ. ವರದಿಯಲ್ಲಾಗಬೇಕಾದ ಮಾರ್ಪಾಡಿನ ಬಗ್ಗೆ ನಾನೂ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ನೇತೃತ್ವದ ಸಮಿತಿ ಜಿಲ್ಲೆಗೆ ಭೇಟಿ ನೀಡಿತ್ತು. ಆಗ ವರದಿಯಿಂದಾಗುವ ತೊಂದರೆ ಬಗ್ಗೆ ಗಮನ ಸೆಳೆಯಲಾಗಿತ್ತು. ರಾಜ್ಯದ ಪಶ್ಚಿಮಘಟ್ಟದ ಸೂಕ್ಷ್ಮಪರಿಸರ ಪ್ರದೇಶದಲ್ಲಿ 1576 ಹಳ್ಳಿಗಳಿವೆ. 155 ಹಳ್ಳಿಗಳನ್ನು ಮಾತ್ರ ಅವಶ್ಯವಿದ್ದಷ್ಟು ಸೇರಿಸಿ ಎಂಬುದನ್ನು ಅಂದಿನ ಅರಣ್ಯ ಮಂತ್ರಿ ರಮಾನಾಥ ರೈ ಸ್ಪಷ್ಟವಾಗಿ ವರದಿ ನೀಡಿದ್ದಾರೆ. ಈಗ ಒಬ್ಬರ ಮೇಲೊಬ್ಬರು ಆರೋಪ ಮಾಡುವುದಲ್ಲ. ಇದು ಜನರ ಜೀವನದ ಪ್ರಶ್ನೆ ಎಂದರು.