

ಯಾದಗಿರಿ: ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ರದ್ದುಗೊಳಿಸಲು ಮುಂದಾಗುತ್ತಿರುವುದನ್ನು ಖಂಡಿಸಿ ಶನಿವಾರ ಕೆಪಿಸಿಸಿ ನೀಡಿದ ಕರೆ ಮೇರೆಗೆ ನಗರದಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಮನವಿಪತ್ರ ಇಲ್ಲದೆ ಪೇಚಾಡಿದ ಪ್ರಸಂಗ ಕಂಡಿತು.
ಆಡಳಿತಾರೂಢ ಸರ್ಕಾರಗಳ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆ ಹಮ್ಮಿಕೊಳ್ಳುವ ವೇಳೆ ಮನವಿಪತ್ರಗಳನ್ನು ಮುದ್ರಿಸಿ ಸಂಬಂಧಿಸಿದ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಆಯಾ ಜಿಲ್ಲಾಧಿಕಾರಿ ಮೂಲಕ ಸಲ್ಲಿಸುವುದು ವಾಡಿಕೆ. ಆದರೆ ಜಿಲ್ಲಾ ಕಾಂಗ್ರೆಸ್ಗೆ ಈ ನಿಯಮ ಅನ್ವಯಿಸುವಂತೆ ಕಾಣುತ್ತಿಲ್ಲ. ಪ್ರತಿಭಟನೆ ಎಂದಾಕ್ಷಣ ಪಕ್ಷದಲ್ಲಿನ ಕೆಲ ಸೋಕಾಲ್ಡ್ ಲೀಡರ್ಗಳು ಥಟ್ ಎಂದು ಫೋಟೋಗಳಿಗೆ ಪೋಜು ಕೊಡಲು ಮುಂದಾಗುತ್ತಿದ್ದಾರೆ ವಿನಃ ಯಾವ ಉದ್ದೇಶಕ್ಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಕ್ಲಾರಿಟಿ ಸಿಗದಿರುವುದು ವರ್ತಮಾನದ ದುರಂತ ಎಂದು ಪಕ್ಷನಿಷ್ಠ ಕಾರ್ಯಕರ್ತರು ಮಾತನಾಡುತ್ತಿರುವುದು ಕೇಳಿಸಿತು.
ಪಕ್ಷದ ಕಚೇರಿಯಿಂದ ಬೈಕ್ ರ್ಯಾಲಿ ಮೂಲಕ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನೆಗಾಗಿ ಪ್ರಿಂಟ್ ತೆಗೆಸಿದ ಬ್ಯಾನರ್ನಲ್ಲಿ ಬೃಹತ್ ಪ್ರತಿಭಟನೆ ಎಂದು ಬರೆದಿದ್ದರೂ ಎಣಿಸಿ ನೋಡಿದರೆ ಬೆರಳೆಣಿಕೆಯಷ್ಟು ಕಾರ್ಯಕರ್ತರು ಕಂಡು ಬಂದರು.
ಆಡಳಿತ ಪಕ್ಷದ ವಿರುದ್ಧ ಸಹಜವೇ ಆರೋಪಗಳ ಸುರಿಮಳೆಗೈದ ಕೆಲ ಲೀಡರ್ಗಳು, ಪ್ರತಿಭಟನೆ ನಂತರ ತಮ್ಮ ಕಾರುಗಳನ್ನು ಹತ್ತಿ ಭರ್ರೆಂದು ಹೊರಟು ಹೋದರು. ಇದರ ವರದಿಗಾಗಿ ತೆರಳಿದ್ದ ಮಾಧ್ಯಮದವರು ಏನು ಬರೆಯಬೇಕು ಎಂದು ತಲೆಕೆಡಿಸಿಕೊಳ್ಳುವಂತಾಯಿತು.