

ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯ ಹಾಗೂ ಅಭಿವೃದ್ಧಿಪರ ಆಡಳಿತ, ಕೈಗೊಂಡ ಪ್ರಮುಖ ನಿರ್ಧಾರಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುಂಚನೂರ, ಕಡಕೋಳ, ಗೊಡಚಿ, ಸಿದ್ನಾಳ, ಕೆ.ಚಂದರಗಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ 2ನೇ ಅವಧಿಗೆ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ, ಎಸ್‌ಡಿಎಂಸಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಅವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಹಾಗೂ ಜಾರಿಗೆ ತಂದ ಜನಪರ ಯೋಜನೆಗಳ ಕುರಿತು ತಿಳಿಸಬೇಕು. ಯೋಜನೆಗಳ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು. 2024ಕ್ಕೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬೆಂಬಲಿಸಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಮಾಸಿಕ ಖರ್ಚು-ವೆಚ್ಚಗಳು ಸರ್ಕಾರಕ್ಕೆ ಹೊರೆಯಾಗುತ್ತಿದೆ. ವೇತನ, ಸಾಲ ಪಾವತಿ, ಗ್ಯಾರಂಟಿಗಳು ಸೇರಿ ಮಾಸಿಕ ಖರ್ಚು 14,556 ಕೋಟಿ ರೂ., ತೆರಿಗೆ ಹಾಗೂ ಇತರ ಮೂಲಕಗಳಿಂದ ಮಾಸಿಕ ಆದಾಯ12.742 ಕೋಟಿ ರೂ. ಇದೆ. ಮಾಸಿಕ ಖರ್ಚಿನ ಕೊರತೆ 1,814 ಕೋಟಿ ರೂ. ಇದ್ದು, ಅಭಿವೃದ್ಧಿ ಕೆಲಸಗಳ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಿದೆ. ಸರ್ಕಾರಿ ನೌಕರರ ಸಂಬಳ, ಪಿಂಚಣಿ ಇತರ ಮಾಸಿಕ ವೆಚ್ಚ 7,500 ಕೋಟಿ ರೂ., ಗ್ಯಾರಂಟಿ ಯೋಜನೆಗೆ ಮಾಸಿಕ ವೆಚ್ಚ 4,300 ಕೋಟಿ ರೂ., ಸಾಮಾಜಿಕ ಭದ್ರತೆಗೆ 886 ಕೋಟಿ ರೂ., ಮಾಸಿಕ ಸಾಲ ಮರುಪಾವತಿ 1,870 ಕೋಟಿ ರೂ. ಹೀಗೆ ಒಟ್ಟು ಮಾಸಿಕ ಖರ್ಚು 14,556 ಕೋಟಿ ರೂ. ಇದ್ದು, ಮಾಸಿಕ ಆದಾಯಕ್ಕಿಂತ ಬಾಬ್ತಿನ ಮೊತ್ತವೇ ಹೆಚ್ಚಾಗಿದ್ದು, ಹೆಚ್ಚುವರಿ ಹಣದ ಕೊರತೆಯಿಂದ ಸರ್ಕಾರ ಕಂಗಾಲಾಗಿದ್ದು, ಆರ್ಥಿಕ ವ್ಯವಸ್ಥೆಯನ್ನೇ ಹದಗೆಡಿಸಿದೆ ಎಂದು ಕವಟಗಿಮಠ ಆರೋಪಿಸಿದರು.
ಡಾ.ಕೆ.ವಿ.ಪಾಟೀಲ, ರವಿಸೂರ್ಯ, ಶಂಕರಗೌಡ ಪಾಟೀಲ, ಬಸವರಾಜ ಮಾದನ್ನವರ, ಮಲ್ಲಿಕಾರ್ಜುನ ಬಾವಿಕಟ್ಟಿ, ವಿಠ್ಠಲ ಝಟಕನ್ನವರ, ಈರಣಗೌಡ ಹೊಸಗೌಡ್ರ ಇತರರಿದ್ದರು.