ವಾಜಪೇಯಿ ಮಹಾನ್ ಮುತ್ಸದ್ದಿ ನಾಯಕ

24 HRR
Published on

ಹರಿಹರ: ದೇಶದ ರಾಜಕೀಯ ಮುತ್ಸದ್ದಿತನದಲ್ಲಿ ವಾಜಪೇಯಿಯವರು ಮೊದಲಿಗರು. ಕಾರಣ ಆಳುವ ಸರ್ಕಾರವನ್ನು ಟೀಕಿಸುವುದು ಮಾತ್ರವಲ್ಲದೇ ವಿರೋಧ ಪಕ್ಷ ಮಾಡಿದ ಒಳ್ಳೆಯ ಕೆಲಸವನ್ನು ಒಪ್ಪಿ ಪ್ರಶಂಸಿಸಬೇಕು ಎಂದು ಹೇಳಿ ಮೇಲ್ಪಂಕ್ತಿಯಾಗಿದ್ದ ಮಹಾನಾಯಕರು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದಲ್ಲಿ ಭಾನುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಜಿಲ್ಲಾ ಬಿಜೆಪಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸತ್ಯ, ನಿಷ್ಠೆ, ನ್ಯಾಯಕ್ಕಾಗಿ ದುಡಿದ ದೇಶ ಪ್ರೇಮಿ ಆಗಿದ್ದ ವಾಜಪೇಯಿ ಅವರು ಅಧಿಕಾರದ ಅವಧಿಯಲ್ಲಿ ಕೃಷಿ, ಬಡತನ, ಯುವ ಸಬಲೀಕರಣ, ವಿಜ್ಞಾನ, ತಂತ್ರಜ್ಞಾನ, ರೈಲ್ವೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದ್ದರು. ದೇಶದ ನದಿಗಳನ್ನು ಜೋಡಣೆ ಮಾಡಿ ರೈತರ ಬಾಳನ್ನು ಉಜ್ವಲಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು ಎಂದರು.

ರಾಜ್ಯ ಬಿಜೆಪಿ ಜನ್ಮ ಶತಮಾನೋತ್ಸವ ಸಮಿತಿ ಪ್ರಮುಖ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರೊಟ್ಟಿಗೆ ಕೆಲಸ ಮಾಡಿದವರನ್ನು ಸ್ಮರಿಸಿ ಗೌರವಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಿಹರದ ಶಾಸಕರನ್ನು ಸಹ ಗೌರವಿಸಲಾಗಿದೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಶತಮಾನೋತ್ಸವ ಸಮಿತಿ ಜಿಲ್ಲಾ ಪ್ರಮುಖ ಕಲ್ಲೇಶ್, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಕೊಟ್ರೇಶ್ ಗೌಡ, ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ಎಸ್ಸಿ ಮೋರ್ಚಾ ಅಧ್ಯಕ್ಷ ಸಂತೋಷ್ ಗುಡಿಮನಿ, ಮುಖಂಡರಾದ ಜಿಗಳಿ ಹನುಮಗೌಡ, ಸ್ವಾತಿ ಹನುಮಂತಪ್ಪ, ಕಡರನಾಯಕನಹಳ್ಳಿ ಮಂಜುನಾಥ್, ವಿನಾಯಕ ಆರಾಧ್ಯಮಠ, ಗಣೇಶ್, ಶಿವರಾಜ್, ಮಹೇಶ್, ಪ್ರಿಯಾಂಕಾ ನಾಯಕ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net