ಭಗವಂತನೊಂದಿಗಿನ ಸಂಬಂಧ ಮಾತ್ರ ಶಾಶ್ವತ

Vidya Lead
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ವ್ಯಾಖ್ಯಾನ

ವಿದ್ಯಾಮಾನ್ಯ ಶ್ರೀಗಳ ಪೀಠಾರೋಹಣದ ಶತಮಾನೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಾನವೀಯ ಸಂಬಂಧಗಳ ಬಗ್ಗೆ ಚಿಂತಿಸದೆ ಶ್ರೀಕೃಷ್ಣನ ಸಂದೇಶದಂತೆ ಮೌಲ್ಯಾಧಾರಿತ ಜೀವನ ಮಾಡಬೇಕು. ಚಿರಂತನ ಮೌಲ್ಯ ಗಮನಿಸಬೇಕೇ ಹೊರತು ತಾತ್ಕಾಲಿಕವಾದ ಸಂಬಂಧ ಅಥವಾ ಪ್ರಯೋಜನ ಆಧರಿಸಿ ಜೀವನ ಮಾಡಬಾರದು. ಮಾನವೀಯ ಸಂಬಂಧಗಳಾದ ಅಕ್ಕ-ಅಣ್ಣ, ತಮ್ಮ-ತಂಗಿ, ತಂದೆ-ತಾಯಿ, ಬಂಧು-ಬಳಗ ಎಲ್ಲವೂ ಸಹ ತಾತ್ಕಾಲಿಕ. ಭಗವಂತನೊಂದಿಗಿನ ಭಕ್ತಿ ಸಂಬಂಧ ಮಾತ್ರ ಶಾಶ್ವತ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

Vidya 2
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್​ ಗೀತೋತ್ಸವದ ಸಂದರ್ಭದಲ್ಲಿ ಭಾನುವಾರ ಸಂಜೆ (ನ.9) ಆಯೋಜಿಸಿದ್ದ ಪಲಿಮಾರು ಮತ್ತು ಭಂಡಾರಕೇರಿ ಮಠದ ಪೀಠಾಧಿಪತಿ ಹಾಗೂ ತಮ್ಮ ಗುರುಗಳಾಗಿದ್ದ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಪೀಠಾರೋಹಣದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಎಲ್ಲರೂ ಗುರುಗಳಿಗೆ ಋಣಿಯಾಗಿರಬೇಕು

Vidya 3
ಪೇಜಾವರ ವಿಶ್ವಪ್ರಸನ್ನ ಶ್ರೀ ಮಾತನಾಡಿ, ಧರ್ಮಕ್ಕೊಂದು ಶರೀರ ಕೊಟ್ಟರೆ ಅದು ಖಚಿತವಾಗಿ ಶ್ರೀರಾಮಚಂದ್ರ. ಅದೇರೀತಿ ಭಗವದ್ಗೀತೆಯ ತತ್ತ್ವಗಳಿಗೆ ರೂಪ ಕೊಟ್ಟರೆ ಅದು ಖಂಡಿತ ನಮ್ಮ ಗುರುಗಳಾಗಿದ್ದ ವಿದ್ಯಾಮಾನ್ಯ ತೀರ್ಥರು ಎನ್ನವುದರಲ್ಲಿ ಸಂಶಯವಿಲ್ಲ. ನಾವೆಲ್ಲರೂ ಗುರುಗಳಿಗೆ ಋಣಿಯಾಗಿರಬೇಕು. ರಾಜಾಂಗಣಕ್ಕೆ ಭೌತಿಕ ರೂಪ ಕೊಟ್ಟವರು ಬೇರೆ ಶ್ರೀಗಳಾಗಿದ್ದರೂ ಕೃಷ್ಣನ ಸನ್ನಿಧಿಯಲ್ಲಿ ನಿರಂತರ ಜ್ಞಾನ ಸತ್ರ ನಡೆಸಿ ಆಧ್ಯಾತ್ಮಿಕ ರೂಪ ಕೊಟ್ಟವರು ವಿದ್ಯಾಮಾನ್ಯರು ಎಂದು ಸ್ಮರಿಸಿದರು.

ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ವಿದ್ವಾನ್​ ಆದ್ಯಪಾಡಿ ಹರಿದಾಸ ಭಟ್​ ಹಾಗೂ ಶತಾವಧಾನಿ ವಿದ್ವಾನ್​ ಡಾ. ರಾಮನಾಥ ಆಚಾರ್ಯ ಅವರು ವಿದ್ಯಾಮಾನ್ಯ ತೀರ್ಥರ ಸ್ಮರಣೆ ಮಾಡಿದರು. ಈಶಾವಾಸ್ಯಂ ಪ್ರತಿಷ್ಠಾನದ ಪ್ರವರ್ತಕ ವಿನಯ ಆಚಾರ್ಯ ಬನ್ನಂಜೆ, ಉಡುಪಿ ಹೋಮ್ಸ್​ನ ಮಾಲೀಕ ರಾಮಪ್ರಸಾದ ಸಿ. ಉಪಸ್ಥಿತರಿದ್ದರು.

ಕೆ.ಎಂ. ಶೇಷಗಿರಿ ಅವರು ತಂತ್ರಜ್ಞಾನದ ಮೂಲಕ ವಿದ್ಯಾಮಾನ್ಯರ ಕುರಿತಾಗಿ ರಚಿಸಿದ ಸಚಿತ್ರ ಚಿಂತನಾ ಲಹರಿಯ ಮಾನ್ಯರ ಗುಣಗಾನ ಪ್ರಸಾರ ಮಾಡಲಾಯಿತು. ಪುತ್ತಿಗೆ ಮಠದ ಶಿಷ್ಯರಾದ ಪ್ರಭವ ಮತ್ತು ಶ್ರೀವತ್ಸ ವೇದಘೋಷ ಪಠಿಸಿದರು. ಸುಧೀಂದ್ರ ಆಚಾರ್ಯ ಸ್ವಾಗತಿಸಿದರು. ಪುತ್ತಿಗೆ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಶ್ರೀಕಾಂತ ಕ್ಯಾತಸಂದ್ರ, ಷಣ್ಮುಖ ಹೆಬ್ಬಾರ್​ ಇತರರು ಸಹಕರಿಸಿದರು.

ಬನ್ನಂಜೆ ರಚಿತ ಗ್ರಂಥ ಬಿಡುಗಡೆ

ಬನ್ನಂಜೆ ಗೋವಿಂದಾಚಾರ್ಯರು ವ್ಯಾಖ್ಯಾನ ಮಾಡಿರುವ ಮಹಾಭಾರತ ತಾತ್ಪರ್ಯ ನಿರ್ಣಯ ಚಂದ್ರಿಕಾ ಗ್ರಂಥವನ್ನು ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ಸನ್ಯಾಸ ಧರ್ಮಕ್ಕೆ ಮಾದರಿ, ಸ್ಫೂರ್ತಿ ವಿದ್ಯಾಮಾನ್ಯರು. ಮಧ್ವ ತತ್ತ್ವ, ಸಿದ್ಧಾಂತ ರಕ್ಷಣೆಗಾಗಿ ವಿದ್ವಾಂಸರ ಪಡೆಯನ್ನೇ ರಚಿಸಿದರು. 1943ರಲ್ಲಿ ಮಾಧ್ವ ರಾದ್ಧಂತ ಸಂವರ್ಧನ ಸಭೆ ಆಯೋಜಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಆಯೋಜಿಸಿ ಮಧ್ವ ಸಿದ್ಧಾಂತ ಉಳಿಸಿ, ಬೆಳೆಸಿದ ಮಹಾತ್ಮರು ಎಂದರು.

ಗೀತೋತ್ಸವದ 2ನೇ ದಿನದ ಕಾರ್ಯಕ್ರಮ ಭಗವದ್ಗೀತೆಯ ವ್ಯಾಖ್ಯಾನ ರೂಪವಾಗಿರಬೇಕೆಂದು ವಿದ್ಯಾಮಾನ್ಯರ ಪೀಠಾರೋಹಣದ ಶತಮಾನೋತ್ಸವ ಆಚರಿಸಿದ್ದೇವೆ. ಭಗವದ್ಗೀತೆಯ ಸರಿಯಾದ ನಿದರ್ಶನ, ಜೀವಂತ ವ್ಯಾಖ್ಯಾನ ಯಾರೆಂದರೆ ಅದು ವಿದ್ಯಾಮಾನ್ಯ ಶ್ರೀಗಳು. ಐಹಿಕ ಪ್ರಯೋಜನ, ಅದರ ಲಾಭ-ನಷ್ಟದ ಬಗ್ಗೆ ಚಿಂತಿಸಿದವರಲ್ಲ. ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದಂತೆ ಶಾಶ್ವತ ಮೌಲ್ಯಗಳ ಬಗ್ಗೆಯೇ ಚಿಂತಿಸಿ ಬದುಕಿದವರು. | ಸುಗುಣೇಂದ್ರ ಶ್ರೀ. ಪರ್ಯಾಯ ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net