ಮಾಯಮುಡಿ ಸರ್ಕಾರಿ ಶಾಲೆಗೆ ಶತಮಾನೋತ್ಸವ ಸಂಭ್ರಮ

mayamidi school
Published on

ಮಡಿಕೇರಿ: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ನ.೧೬, ೧೭ ರಂದು ನಡೆಯಲಿದೆ ಎಂದು ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ತಿಳಿಸಿದರು.

ಶತಮಾನೋತ್ಸವದ ಪ್ರಯುಕ್ತ ನ.೧೫ರಂದು ಸಾರ್ವಜನಿಕರಿಗೆ ಪೊನ್ನಂಪೇಟೆ ತಾಲೂಕು ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ ಮತ್ತು ಜಿಲ್ಲಾಮಟ್ಟದ ಹಗ್ಗಜಗ್ಗಾಟ ಸಾರ್ವಜನಿಕರಿಗೆ ನಡೆಯಲಿದೆ. ಇದರೊಂದಿಗೆ ವಿವಿಧ ಕ್ರೀಡಾಕೂಟಗಳು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ.೧೬ರಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ವಿವಿಧ ಕ್ರೀಡಾಕೂಟವನ್ನು ಮಾಜಿ ಎಂಎಲ್‌ಸಿ ಚೆಪ್ಪುಡಿರ ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ ೨ಗಂಟೆಗೆ ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ಸಭಾಕಾರ್ಯಕ್ರಮವನ್ನು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ.ಎಸ್.ಪೊನ್ನಣ್ಣ ವಹಿಸಲಿದ್ದಾರೆ. ನೂತನ ಸಭಾಂಗಣವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಮಂತರ್‌ಗೌಡ, ಎಂಎಲ್‌ಸಿ ಸುಜಾ ಕುಶಾಲಪ್ಪ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕಾಳಪಂಡ.ಟಿ.ಬಿದ್ದಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನ.೧೭ರಂದು ಮಧ್ಯಾಹ್ನ ೧ ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕರಾದ ಎ.ಎಸ್.ಪೊನ್ನಣ್ಣ, ಮಾಜಿ ಎಂಎಲ್‌ಸಿ ಚೆಪ್ಪುಡಿರ ಅರುಣ್ ಮಾಚಯ್ಯ, ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶಾಲೆಯಲ್ಲಿ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಬಳಿ ನಿಯೋಗ ತೆರಳಿ ಮನವಿ ಮಾಡಲಾಗಿತ್ತು. ಈ ಸಂದರ್ಭ ಸಭಾಭವನದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು, ಶಾಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಎಸ್.ಪೊನ್ನಣ್ಣ ಅವರು ೭ ಲಕ್ಷ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಶತಮಾನೋತ್ಸವ ಸಮಾರಂಭದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎನ್.ಪ್ರಥ್ಯು ಮಾತನಾಡಿ, ಎರೆಡು ದಿನಗಳು ಜಿಲ್ಲೆಯ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.೧೭ರಂದು ಸ್ವರಾಜ್ ಶೆಟ್ಟಿ ಅಭಿನಯದ ಶಿವದೂತ ಗುಳಿಗ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕಾಳಪಂಡ.ಟಿ.ಬಿದ್ದಪ್ಪ, ಖಜಾಂಚಿ ಎಸ್.ಎಸ್.ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net