

ವಿಜಯವಾಣಿ ಸುದ್ದಿಜಾಲ ಉಡುಪಿ
ದೇವಾಂಶ ಸಂಭೂತರಾಗಿದ್ದ ಅದಮಾರು ಮಠದ ವಿಬುಧಪ್ರಿಯ ಶ್ರೀಗಳ ತಪೋಶಕ್ತಿಯಿಂದ ಉಡುಪಿಯ ಮಧ್ವ ಸರೋವರದಲ್ಲಿ ಗಂಗೆ ನೆಲೆಸುವಂತಾಗಿದೆ. ಗಂಗಾಪಾನ-ಗಂಗಾ ಸ್ನಾನ ಪುಣ್ಯದ ಕಾರ್ಯ. ದೇವಲೋಕ, ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಸೇತುವೆಯಾಗಿ ಮೂರು ಲೋಕಗಳ ದರ್ಶನ ಮಾಡಿಸುತ್ತಾಳೆ. ಜೀವನದಲ್ಲಿ ಒಮ್ಮೆಯಾದರೂ ಗಂಗಾ ಸ್ನಾನ ಮಾಡಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಪುತ್ತಿಗೆ ಮಠದ ಪ್ರಧಾನ ಪುರೋಹಿತ ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ಕಳಶ ಪೂಜೆ ನಡೆಯಿತು. ಬಳಿಕ ಪುತ್ತಿಗೆ ಶ್ರೀಪಾದ ದ್ವಯರು ಮಧ್ವ ಸರೋವರಕ್ಕೆ ಕ್ಷೀರಾಭಿಷೇಕ, ಕಲಶಾಭಿಷೇಕದೊಂದಿಗೆ ಗಂಗಾ ಸ್ನಾನ ಮಾಡಿದರು.
ಗಂಗಾ ಸ್ನಾನದಿಂದ ಸರ್ವ ಸಂಕಷ್ಟ, ಅನೇಕ ಕಾಯಿಲೆಗಳೂ ದೂರವಾಗುತ್ತದೆ. ತನ್ನ ಕುಟುಂಬದ ಹಿರಿಯರಿಗೆ ಮುಕ್ತಿ ಕೊಡಿಸಲು ಭಗೀರಥ ಮಹಾರಾಜನ ತಪಸ್ಸಿನ ಫಲದಿಂದ ದೇವಲೋಕದಿಂದ ಗಂಗೆ ಭೂಲೋಕಕ್ಕೆ ಬಂದಿದ್ದಾಳೆ. ಅಂತಹ ಗಂಗೆಯ ದರ್ಶನದಿಂದ ಬದುಕಿನ ದುಗುಡ ನಿವಾರಣೆಯಾಗಿ, ಕುಟುಂಬಗಳಲ್ಲಿ ಬಾಂಧವ್ಯವೂ ಗಟ್ಟಿಯಾಗುತ್ತದೆ. | ವಿಶ್ವಪ್ರಿಯ ತೀರ್ಥ ಶ್ರೀಪಾದರು. ಅದಮಾರು ಮಠ