

ಹಂಸಭಾವಿ: ಹಿರೇಕೆರೂರ ತಾಲೂಕಿನ ಹಂಸಭಾವಿ ಒಂದು ಸುಂದರ ಗ್ರಾಮ. ಇಂದು ಶೈಕ್ಷಣಿಕವಾಗಿ ಈ ಗ್ರಾಮಕ್ಕೆ ರಾಷ್ಟ್ರಮಟ್ಟದ ಗೌರವ ದೊರೆತಿದ್ದು ಇಲ್ಲಿನ ಮೃತ್ಯುಂಜಯ ವಿದ್ಯಾಪೀಠದಿಂದ ಎಂದರೆ ತಪ್ಪಾಗಲಾರದು.
ಹಂಸಭಾವಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಕ್ಕಳ ಬಾಳಿಗೆ ಅಕ್ಷರದೀಪವಾದ ಶ್ರೀ ಮೃತ್ಯುಂಜಯಪ್ಪಗಳ ಶ್ರೀರಕ್ಷೆ, ವಿದ್ವತ್ ಪರಂಪರೆ ಮತ್ತು ಶರಣ ಸಂಸ್ಕೃತಿಯ ವಿಚಾರಧಾರೆಗಳತ್ತ ಶಿಕ್ಷಣ ಪ್ರೇಮಿಗಳ ಅದಮ್ಯ ಹಂಬಲಗಳಿಂದ ಇಂದು ವಿದ್ಯಾಕಾಶಿಯಾಗಿದೆ.
ವಿದ್ಯಾಸಂಸ್ಥೆಯಲ್ಲಿ ಈಗ ಪೂರ್ವ ಪ್ರಾಥಮಿಕದಿಂದ ಸ್ನಾತಕ ಮತ್ತು ವೃತ್ತಿಪರ ಕೋರ್ಸ್ಗಳು ನಡೆಯುತ್ತಿದ್ದು, ವಿದ್ಯಾಪೀಠವು ಗ್ರಾಮೀಣ ಬಡ ಮತ್ತು ಹಿಂದುಳಿದ ವರ್ಗದ ಪಾಲಿಗೆ ವರದಾನವಾಗಿದೆ. ವಿದ್ಯಾಪೀಠದ ಆವರಣದಲ್ಲಿ ಅಭಿವೃದ್ಧಿ ಹೊಂದುತ್ತ ಹತ್ತು ಹಲವು ಅಂಗ ಸಂಸ್ಥೆಗಳನ್ನು ಹೊಂದಿ ಇಂದು ಹೆಮ್ಮರವಾಗಿ ಬೆಳೆದು ಡಿ. 9ರಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
ಡಿ. 9ರಂದು ನಡೆಯುವ ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೈಸೂರಿನ ಸುತ್ತೂರಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮ್ಮುಖವನ್ನು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಶಿರಾಳಕೊಪ್ಪದ ವಿರಕ್ತಮಠದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ವಿಪ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಂ. ಎಲಿ ವಹಿಸಲಿದ್ದು, ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುವರು.
ಅತಿಥಿಗಳಾಗಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ಬಿ.ಎಚ್. ಬನ್ನಿಕೋಡ, ನೆಹರು ಓಲೇಕಾರ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಿ.ಎಂ. ಸಾಲಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಭಾರತಿ ಶೆಟ್ಟಿ, ಕನ್ಸೋಲೇಟ್ ಜರ್ನಲ್ ಭಾರತ ಸರ್ಕಾರ ಚೀನಾದ ಶಂಭು ಹಕ್ಕಿ, ಏರ್ ಕಮಾಂಡರ್ ಅರುಣಕುಮಾರ ಬೇವಿನಮರದ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಗ್ರಾ.ಪಂ. ಅಧ್ಯಕ್ಷ ರಾಜಶೇಖರ ಹುಚಗೊಂಡ್ರ, ವಿಶೇಷ ಸನ್ಮಾನಿತರಾಗಿ ಡಾ.ಬಸವರಾಜ ಕೆರೂಡಿ ಹಾಗೂ ಡಾ.ಅನುಸೂಯಾ ಕೆರೂಡಿ ಆಗಮಿಸಲಿದ್ದಾರೆ.
ಡಿ. 9ರಂದು ಹಳೇ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಮೃತ್ಯುಂಜಯ ವಿದ್ಯಾಪೀಠದ ಉಪಾಧ್ಯಕ್ಷ ವಿಜಯಾನಂದ ಆರ್.ಎಸ್. ಅಧ್ಯಕ್ಷತೆ ವಹಿಸಲಿದ್ದು, ಬಸವರಾಜ ಉಳ್ಳಾಗಡ್ಡಿ ಉಪಸ್ಥಿತರಿರುವರು.
ಅತಿಥಿಗಳಾಗಿ ಡಾ.ರುದ್ರಮುನಿ ಎಸ್. ಎಲಿ, ಡಾ.ಮಹಾದೇವಪ್ಪ ವೈ. ಕರಿದುರಗನವರ, ಡಾ.ಎನ್.ಬಿ. ಸಂಗಾಪುರ, ಡಾ. ಅನುಪಮಾ ಸಿ. (ಹೆಗ್ಗೇರಿ), ಸಾಹಿತಿ ಸಂಕಮ್ಮ ಸಂಕಣ್ಣನವರ, ಡಾ.ಆರ್.ಎನ್.ಪಾಟೀಲ, ಡಾ.ಕೆ.ಎಸ್. ಮಾವಿನತೋಪ, ಡಾ.ಮೃತ್ಯುಂಜಯ ಮೊಗಲಿ ಆಗಮಿಸಲಿದ್ದಾರೆ.
ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಟಕ ಪ್ರದರ್ಶನ, ಕನ್ನಡ ಕೋಗಿಲೆ ಪ್ರಶಸ್ತಿ ವಿಜೇತ ಕಾಸೀಮ್ ಇವೆಂಟ್ಸ್ ತಂಡದವರಿಂದ ಸಂಗೀತ ಸಂಜೆ, ಮಲ್ಲೇಶ ಹೂಗಾರ ತಂಡದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ.